ಸರ್ಜಿಕಲ್ ಸ್ಟ್ರೈಕ್ ಘಟನಾವಳಿ ಆಧಾರಿತ ಉರಿ ಸಿನೆಮಾ ವೀಕ್ಷಿಸಿದ ಪೇಜಾವರ, ಸೋದೆ ಸ್ವಾಮೀಜಿಗಳು
ಉಡುಪಿ: ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನಾವಳಿ ಆಧರಿತ ಉರಿ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಪ್ರಧಾನಿ, ಉಪರಾಷ್ಟ್ರಪತಿ, ರಕ್ಷಣಾ ಸಚಿವೆ ಆದಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ಚಲನಚಿತ್ರ ಸನ್ಯಾಸಿಗಳನ್ನೂ ತನ್ನೆಡೆಗೆ ಸೆಳೆದಿದೆ.
ಗುರುವಾರ ರಾತ್ರಿ ಮಣಿಪಾಲದ ಭಾರತ್ ಸಿನೆಮಾ ಚಿತ್ರಮಂದಿರದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಉರಿ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸೋದೆ ಶ್ರೀಗಳು, ಸನ್ಯಾಸಿ ಮತ್ತು ಸೈನಿಕ ಸಮಾಜಕ್ಕಾಗಿಯೇ ಬದುಕುತ್ತಾರೆ. ಹೀಗಾಗಿ ಸೈನಿಕರ ಶೌರ್ಯ ಮತ್ತು ಪರಾಕ್ರಮವನ್ನು ಅರಿತುಕೊಳ್ಳಲು ಸಿನಿಮಾ ಒಂದು ಮಾಧ್ಯಮವಾಗಿದೆ. ದೇಶಭಕ್ತಿ ಮತ್ತು ಯೋಧರ ಮೇಲಿನ ಅಭಿಮಾನದಿಂದ ಸಿನಿಮಾ ವೀಕ್ಷಿಸಲು ಬಂದಿದ್ದೇವೆ ಎಂದರು.