ಸರ್ವರೂ ಸಂಭ್ರಮಿಸುವ ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ – ಪ್ರದೀಪ್‍ಕುಮಾರ್ ಕಲ್ಕೂರ
ಮಂಗಳೂರು :ಜಾತಿ, ಬೇದವಿಲ್ಲದೆ ಸರ್ವರೂ ಸಂಭ್ರಮಿಸುವ ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಎಸ್ ಪ್ರದೀಪ್‍ಕುಮಾರ್ ಕಲ್ಕೂರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆಯ ಉದ್ಘಾಟನೆ ನಡೆಸಿ ಮಾತನಾಡಿದ ಇವರು, ಶ್ರೀ ಕೃಷ್ಣ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತರಾದವರಲ್ಲ, ಆತ ಮನುಕುಲಕ್ಕೆ ಪ್ರೇರಣಾತ್ಮಕ ಶಕ್ತಿ. .ಭಗವದ್ಗೀತೆ ಮನಕುಲದ ಸರ್ವಧರ್ಮದ ಸಾರ. ಕೃಷ್ಣನ ಚಿಂತನೆ ಜಗತ್ತಿಗೆ ಮೀಸಲಾಗುವಂತಹದು. ವಿದ್ಯಾರ್ಥಿಗಳು ಇಂದಿನ ಕಾಲದಲ್ಲಿ ವಿದ್ಯಾಭ್ಯಾಸದ ಜೊತೆಗೆ ಇತರ ಜ್ಞಾನವನ್ನು ಪಡೆದುಕೊಳ್ಳಬೇಕು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಕೃಷ್ಣ ರಾಧೆಯ ವೇಷ ತೊಡಿಸಿ ತಾಯಂದಿರು ಸಂಭ್ರಮಿಸುತ್ತಾರೆ ಎಂದರು.
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುತ್ತಿರುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸಲಾಗುವುದು. ಕೃಷ್ಣನ ಜನನದ ಉದ್ದೇಶವೇ ದುಷ್ಟರನ್ನು ಶಿಕ್ಷಿಸುವುದು ಮತ್ತು ಇಷ್ಟರನ್ನು ಪೊರೆದು ರಕ್ಷಿಸುವುದಾಗಿದೆ ಅದೇ ರಿತಿಯಲ್ಲಿ ಭೂಮಿಯ ಹೊರೆ ಇಳಿಸಿದಾತ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ ಶ್ರೀಶ ಕುಮಾರ ಎಂ ಕೆ ಉಪನ್ಯಾಸ ನೀಡಿದರು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೊನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾಸಂಘದ ಅಧ್ಯಕ್ಷರಾದ ಟಿ ಆರ್ ಕುಮಾರಸ್ವಾಮಿ, ಮಂಗಳೂರು ಯಾಧವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷರಾದ ಮಧುಸೂದನ ಆಯಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.