ಸರ್ವೇ ವೇಳೆ ಬಂಗಾರಪೇಟೆ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದು ಕೊಲೆ
ಕೋಲಾರ: ಸರ್ವೇ ಮಾಡುವ ವೇಳೆ ಗೊಂದಲವಾಗಿ ತಹಶೀಲ್ದಾರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೊಡ್ಡಕಳವಂಚಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದ ವೆಂಕಟಪತಿ ತಹಶೀಲ್ದಾರ್ ಚಂದ್ರಮೌಳೇಶ್ವರಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಕಳೆದ 3 ವರ್ಷಗಳಿಂದ ಬಂಗಾರಪೇಟೆ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರು ಮೂಲದ ಚಂದ್ರಮೌಳೇಶ್ವರ್ ಗೆ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಬಂಗಾರಪೇಟೆಯ ದೊಡ್ಡಕಳವಂಕಿ ಗ್ರಾಮದ ಅರೋಪಿ ನಿವೃತ್ತ ಶಿಕ್ಷಕ ವೆಂಕಟಪತಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಈ ಸಂಬಂಧ ಸರ್ವೇ ಮಾಡಲು ಹೋದ ವೇಳೆ ತಹಶೀಲ್ದಾರ್ಗೆ ಚಾಕುವಿನಿಂದ ಇರಿಯಲಾಗಿದೆ. ತಕ್ಷಣ ತಹಶೀಲ್ದಾರ್ ಕಾರಿನಲ್ಲಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಜಾಲಪ್ಪ ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಮೊಹಮದ್ ಸುಜಿತ ಅವರು ಭೇಟಿ ನೀಡಿದ್ದಾರೆ. ಮೃತ ತಹಶೀಲ್ದಾರ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವರಾಗಿದ್ದಾರೆ.