ಸರ್ವ ಧರ್ಮಗಳು ಒಳಿತನ್ನೇ ಜಗತ್ತಿಗೆ ಸಾರಿದೆ – ವಂ| ಜೆ.ಬಿ. ಕ್ರಾಸ್ತ
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ಪೋರ್ಟ್ ವಾರ್ಡ್ ಫ್ರೆಂಡ್ಸ್ ಇವರು ಜಂಟಿಯಾಗಿ ಮಂಗಳೂರಿನ ಡಿ.ಸಿ. ಕಛೇರಿ ಮುಂದೆ ಕ್ರಿಸ್‍ಮಸ್ ಸೌಹಾರ್ದ ಸಂಗಮ ಎಂಬ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಅಯೋಜಿಸಲಾಗಿದ್ದು ಕಾರ್ಯಕ್ರಮದ ಯಶಸ್ಸು ಮತ್ತು ವೇದಿಕಯಲ್ಲಿ ಮೂರು ಧರ್ಮಗಳ ಗುರುಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸರ್ವಧರ್ಮದ ಧರ್ಮಗುರುಗಳ ಸಮಕ್ಷಮದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಐವನ್ ಡಿ’ಸೋಜ ಕೇಕ್ ಕತ್ತರಿಸಿ ಉದ್ಘಾಟಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಶ್ರೀ ಈಶ ವಿಠಲ್ ದಾಸ್ ಸ್ವಾಮೀಜಿಯವರು ಮಾತಾನಾಡುತ್ತ ನಾವು ಡಿ.ಸಿ. ಕಛೇರಿಯ ಮುಂದೆ ಹಲವು ಪ್ರತಿಭಟನೆಗಳು ಹಕ್ಕೊತ್ತಾಯಗಳು ನಡೆಯುತ್ತಿರುವಾಗ ನಾನು ಬಂದಿದ್ದೇ, ಆದರೆ ಇದೊಂದು ವಿಶೇಷ ಕಾರ್ಯಕ್ರಮವನ್ನು ಸೌಹರ್ದತೆಗಾಗಿ ಡಿ.ಸಿ. ಕಛೆರಿಯ ಮುಂದೆ ಮಾಡಿರುವ ಮುಖೇನತ ನಾಡಿನ ಜನತೆಗೆ ಈ ಮೂಲಕ ಸೌಹಾರ್ದತೆಯ ಸಂದೇಶವು ಹರಿದು ಹೋಗಲು ತುಳುನಾಡ ರಕ್ಷಣಾ ವೇದಿಕೆ ಪ್ರಯತ್ನಿಸಿಸುತ್ತಿರುವುದು ಸಂತೋಷದ ವಿಷಯ ಮತ್ತು ಮಾನವೀಯತೆಯು ನಮ್ಮಲ್ಲಿ ಉಳಿಯಲಿ, ನಮ್ಮ ಜೀವನದಲ್ಲಿ ನಾವು ಗಾತ್ರಕ್ಕೆ ಕೊಡುವ ಮಹತ್ವಕ್ಕಿಂತ ಭಾರಕ್ಕೆ ಕೊಡುವ ರೀತಿಯಲ್ಲಿ ನಮ್ಮ ಹೃದಯದಲ್ಲಿ ಮಾನವೀಯತೆಯ ಭಾರವನ್ನು ಹೆಚ್ಚಿಸಿ, ಕೋಮುವಾದದ ಗಾತ್ರವನ್ನು ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ಉದಾಹರಣೆಯೊಂದಿಗೆ ನೀಡಿದರು.
ಮತ್ತೋರ್ವ ಶಾಂತಿ ಪ್ರಕಾಶನದ ಜನಾಬ್ ಮುಹಮ್ಮದ್ ಕುಂಞ್ಞಯವರು ಮಾತಾನಾಡಿ ಜಗತ್ತಿನಲ್ಲಿ ಇದೀಗ ಸಕಲ ಮಾನವ ಕುಲದ ಸಹೋದರತೆ, ಸೌಹಾರ್ದತೆಯು ನಮ್ಮಿಂದ ಮಾಯವಾಗುತ್ತಾ ಬಂದಿರುವುದು ಖೇದಕರ, ಮತ್ತು ಸಮಾಜದಲ್ಲಿ ಪರಸ್ಪರ ಭರವಸೆಗಳು ನಂಬಿಕೆಗಳು ಇಲ್ಲದಂತಾಗಿದೆ ಎಂದರು. ಗಂಡನಿಗೆ ಹೆಂಡತಿ ಮೇಲೆ ವಿಶ್ವಾಸ ಇಲ್ಲ. ತಂದೆಗೆ ಮಕ್ಕಳ ಮೇಲೆ ವಿಶ್ವಾಸ ಇಲ್ಲ. ಹಿಂದುಗಳಿಗೆ ಮುಸ್ಲಿಂ ಜನರಲ್ಲಿ ವಿಶ್ವಾಸವಿಲ್ಲ, ಮುಸ್ಲಿಮರಿಗೆ ಹಿಂದುಗಳಲ್ಲಿ ವಿಶ್ವಾಸ ಇಲ್ಲದಾಗಿದೆ ಹೀಗೆ ಪರಸ್ಪರ ಇರ ಬೇಕಾದ ನಂಬಿಕೆಗಳು ಮಾಯಾವಾಗುತ್ತ ಬಂದಿವೆ. ಇದು ಮಾನವೀಯತಾ ಜೀವನದ ಬಹು ದೊಡ್ಡ ದುರಂತಗಳಲ್ಲಿ ಒಂದಾಗಿದೆ ಎಂದು ಖೇಧ ವ್ಯಕ್ತ ಪಡಿಸಿದರು.
ಕ್ರೈಸ್ತ ಗುರುಗಳಾದ ಪಾದರ್ ಜೆ.ಬಿ. ಕ್ರಾಸ್ತ ಇವರು ಮಾತಾನಾಡಿ, ಸರ್ವಧರ್ಮಗಳು ಒಲಿತನ್ನೇ ಈ ಜಗತ್ತಿಗೆ ಸಾರಿದೆ ಮತ್ತು ಕೆಡುಕುಗಳನ್ನು ವಿರುದ್ಧ ಮಾತಾನಾಡಿದೆ. ಆದ್ದರಿಂದ ನಾವು ನಮ್ಮ ಧರ್ಮಗಳ ಬಗ್ಗೆ ಮೊದಲು ತಿಳಿಯಬೇಕು. ಯಾವ ಧರ್ಮವನ್ನು ನಾವು ಟೀಕಿಸಬಾರದು. ನಮ್ಮ ಧರ್ಮದ ಬಗ್ಗೆ ಅಥವಾ ನಮ್ಮ ಧರ್ಮದ ಆಚಾರ ವಿಚಾರಗಳನ್ನು ಇನ್ನೊಂದು ಧರ್ಮದವರು ಪಾಲನೆ ಮಾಡುವುದಾದರೆ ಅದು ಅವರ ಸ್ವಾತಂತ್ರ್ಯ ಮತ್ತು ಆಸಕ್ತಿಯೆ ಹೊರತು ಹುನ್ನಾರವಲ್ಲ ಎಂಬ ಸಂದೇಶವನ್ನು ಬಹಳ ಮಾರ್ಮಿಕವಾಗಿ ಮಾತಿನ ಮುತ್ತುಗಳ ಮೂಲಕ ಸುರಿಸಿದರು.
ಕರ್ನಾಟಕ ಸರ್ಕಾರ ಬ್ಯಾರಿ ಅಕೆಡೆಮಿಯ ಅಧ್ಯಕ್ಷರಾದ ನ್ಯಾಯವಾದಿ ಮಹಮ್ಮದ್ ಹನೀಪ್ ರವರು ಮಾತಾನಾಡುತ್ತ ನಾವೆಲ್ಲರೂ ಆದಂ ಮತ್ತು ಅವ್‍ರವರ ಮೊದಲ ಮಕ್ಕಳ ಸಂತಾನಗಳು, ಜಗತ್ತಿಗೆ ಅಲ್ಲಾಹನು ಅವರನ್ನು ಮೊದಲು ತನ್ನ ಇಚ್ಛೆಯಂತೆ ಕಳುಹಿದನು ಆಮೇಲೆ ಅಲ್ಲಿಂದ ಭೂಲೋಕದಲ್ಲಿ ಮನುಷ್ಯ ಸಂತಾನದ ಸೃಷ್ಟಿಯು ಪ್ರಾರಂಭವಾಯಿತು. ಆದ್ದರಿಂದ ನಾವೆಲ್ಲರೂ ಪರಸ್ಪರ ಸಹೋದರ ಸಹೋದರಿಯರು ಎಂಬ ಸಂದೇಶವನ್ನು ಜನತೆಗೆ ತಿಳಿಯಪಡಿಸಿದರು.
ಐವನ್ ಡಿ’ಸೋಜ ರವರು ಮಾತಾನಾಡಿ ನಾವು ಯಾರು ಅರ್ಜಿ ಹಾಕಿಕೊಂಡು ಇಂತ್ತಿಂಥ ಧರ್ಮದಲ್ಲಿ ಹುಟ್ಟಿಕೊಂಡು ಬಂದವರಲ್ಲ. ನಮ್ಮ ಹೆತ್ತವರ ಅನುಕರಣೆಯಿಂದ ನಾವು ಆ ಧರ್ಮದ ಅನುಯಾಯಿಗಳಾದೆವು. ನಾವು ಇತರರ ಧರ್ಮಗಳ ಕುಂದು ಕೊರತೆಗಳನ್ನು ಹುಡುಕುವ ಬದಲು ನಮ್ಮ ಧರ್ಮಗಳಲ್ಲಿರುವ ನೊಂದ ಜನತೆಗೆ ಸಹಾಯಕರಾಗಿ ಅಪತ್ಬಾಂಧವರಾಗಿ ಅವರ ಬಗ್ಗೆ ಕನಿಕರ ತೋರಿಸೋಣ ಆಗ ಮಾತ್ರ ನಮ್ಮ ಧರ್ಮದ ಗೌರವ ನಾವು ಉಳಿಸಿಕೊಂಡಂತೆ ಆಗುತ್ತದೆ. ಧರ್ಮಕ್ಕೆ ಕೆಟ್ಟ ಹೆಸರನ್ನು ತರುವ ಕೆಲಸ ಮಾಡದೇ, ನಾವು ಮಾನವರಾಗೋಣ, ನಮ್ಮ ಹಬ್ಬಗಳು ಅದು ಒಂದು ಧರ್ಮಕ್ಕೆ ಸೀಮಿತವಾಗಿದರೇ ಅದು ಸಾಮಾಜಿಕ ಹಬ್ಬಗಳಾಗಿ ಎಲ್ಲರಿಗೂ ಅದನ್ನು ಅನುಭವಿಸುವ ಮತ್ತು ಪರಸ್ಪರ ಜಾತಿ ಧರ್ಮಗಳ ಮಧ್ಯೆ ಇರುವ ಕಂದಕಗಳನ್ನು ಕಳಚುವ ಕೆಲಸವನು ಮಾಡೋಣ. ಇಂತಹ ಸೌಹಾರ್ದತೆಯ ಹಬ್ಬಗಳ ಸಂಗಮದಿಂದ ನಮ್ಮ ನಾಡಿನ ಜನತೆಗೆ ಮಾತ್ರ ಅಲ್ಲ ದೇಶದ ಜನತೆಗೆ ತುಳುನಾಡ ರಕ್ಷಣಾ ವೇದಿಕೆ ಮತ್ತು ಫೋರ್ಡ್ ವಾರ್ಡ್ ಫ್ರೆಂಡ್ಸ್ ಇವರ ಈ ಅರ್ಥಪೂರ್ಣ ಕಾರ್ಯಕ್ರಮವು ಮಾದರಿಯಾಗಲಿ ಎಂದರು. ದಲಿತ ಸಂಘರ್ಷ ಸಮಿತಿಯ ಸದಸ್ಯರಾದ ಪಿ. ಕೇಶವ ಇವರು ಮಾತನಾಡಿ ನಮ್ಮ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ನಾವು ಮಾಡಿದಾಗ ದೇಶದ ಶಾಂತಿಗೆ ಮತ್ತು ಸೌಹಾರ್ಧತೆಗೆ ಭಂಗವಾಗಿದೆ ಎಂಬ ಮಾತನ್ನು ನೆನಪಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಮಾತನಾಡುತ್ತಾ ಹೇಳಿದರು ಸಂಘಟನೆಗಳು ಜಾತ್ಯಾತೀತವಾಗಿರಬೇಕು. ಅದು ಎಲ್ಲ ಜಾತಿ ಧರ್ಮಿಯರ ಧ್ವನಿಯಾಗಿರಬೇಕು. ಆಗ ಮಾತ್ರ ಆ ಸಂಘಟನೆಯು ಬಲಶಾಲಿಯಾಗಿ ಮತ್ತು ಎಲ್ಲರ ಪ್ರೀತಿ ಪಾತ್ರವಾಗಿರುತ್ತದೆ. ಇಂತಹ ಸಂಘಟನೆಗಳಲ್ಲಿ ನಮ್ಮ ಸಂಘಟನೆಯು ಒಂದಾಗಿದೆ ಎಂಬ ಹೆಮ್ಮ ನಮಗಿದೆ. ನಮ್ಮಲ್ಲಿ ಎಲ್ಲ ಜಾತಿ, ಧರ್ಮ, ಪಂಗಡ, ಭಾಷಾ ಬೇದಗಳಿಲ್ಲ. ನಾಡಿನ ಶಾಂತಿ ಕಾಪಾಡುವ ಮತ್ತು ಜನತೆಯ ಅನ್ಯಾಯದ ವಿರುದ್ಧ ನಮ್ಮ ಹೋರಾಟಗಳು ನಿರಂತರವಾಗಿದೆ. ಶಾಂತಿಯು ದೇಶದ ಶಕ್ತಿಯಾಗಿದೆ. ನ್ಯಾಯದ ಹೆಸರಲ್ಲಿ ಅಶಾಂತಿಯನ್ನುಂಟು ಮಾಡಲು ನಾವುಗಳು ತೋರಿಸುವ ಆಸಕ್ತಿಗಿಂತ ಶಾಂತಿಯನು ಕಾಪಾಡಲು ಉಪಯೋಗಿಸಿದಾಗ ಮಾತ್ರ ನಮ್ಮ ಜೀವನ ವ್ಯವಸ್ಥೆಯಲ್ಲಿ ನೆಮ್ಮದಿ ಮತ್ತು ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಇಂತಹ ಸಭಹಾರ್ಧತೆಯು ಹಬ್ಬಗಳ ಸಂಗಮದ ಮೂಲಕ ನಮ್ಮ ಎಲ್ಲ ಹಬ್ಬಗಳು ಮೂಡಿ ಬರಬೇಕು.
ಎಲ್ಲ ಧರ್ಮಗಳ ಗುರುಗಳು ನಾಯಕರು ಹಿಂಬಾಲಕರು ಈ ಬಗ್ಗೆ ಮುಂದೆ ಬಂದಾಗ ಮಾತ್ರ ಸುಂದರವಾದ ಪ್ರಕೃತಿದತ್ತ ರಮಣೀಯ ಹಸಿರು ಅರಣ್ಯದ, ಹರಿವ ನದಿಗಳ ಮತ್ತು ಸಮುದ್ರ ಸಂಪತ್ತಿನ ಈ ತುಳುನಾಡಿನ ಮೂಲಕ ದೇಶದ ಮೂಲೆ ಮೂಲೆಗಳಿಗೆ ಸೌಹಾರ್ದತೆಯ ಸಂದೇಶವನು ಸಾರಿ, ಈ ದೇಶದ ಶಾಂತಿ ನೆಮ್ಮದಿಯ ಬದುಕಿಗೆ ನಾವೆಲ್ಲರೂ ಕಾರಣರಾಗಬೇಕು ಎಂದು ತನ್ನ ಮನದಾಳದ ಬಯಕೆಯನ್ನು ಬಿಚ್ಚಿಟ್ಟು ಮಾತನಾಡಿದರು.
ವೇದಿಕೆಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ದಲಿತ ಸಂಘರ್ಷ ಸಮಿತಿಯ ಪಿ. ಕೇಶವ್, ಬದ್ರಿಯ ಕಾಲೇಜಿನ ಪ್ರಿನ್ಸ್‍ಪಾಲರಾದ ಡಾ. ಎನ್. ಇಸ್ಮಾಯಿಲ್ ತುಳುನಾಡ ರಕ್ಷಣಾ ವೇದಿಕೆಯ ಮುಖಂಡರುಗಳಾದ ಹಾಗೂ ನ್ಯಾಯವಾದಿಗಳಾದ ರಾಘವೇಂದ್ರ ರಾವ್, ಮೋಹನ್ ದಾಸ್ ರೈ, ಹಮೀದ್ ಹಸನ್ ಮಾಡೂರು, ರಕ್ಷಿತ್ ಬಂಗೇರ, ಆನಂದ ಅಮೀನ್, ಹರೀಶ್ ಶೆಟ್ಟಿ, ರಮೇಶ್ ಪೂಜಾರಿ ಶಿರೂರು, ಇಬ್ರಾಹಿಂ ಜಪ್ಪು, ಅಬ್ದುಲ್ ರಸೀದ್ ಜಪ್ಪು, ಜ್ಯೋತಿಕಾ ಜೈನ್ ಮೊದಲಾದವರು ಜತೆಗಿದ್ದರು.
ಪ್ರಶಾಂತ್ ಭಟ್ ಕಡಬ ಸ್ವಾಗತಿಸಿದರು, ಸಿರಾಜ್ ಅಡ್ಕರೆ ವಂದನಾರ್ಪಣೆ ಗೈದರು, ಶ್ರೀಮತಿ ಮಂಜುಳ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಗೈದರು.