ಸವಾಲುಗಳು ನೂರಾರು ಆದರೆ ಕನ್ನಡ ಒಂದೇ ಜಪ: ಹಂಸಲೇಖ
ದೆಹಲಿ: 61 ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ತಿಂಗಳ ಪೂರ್ತಿ ಕಾರ್ಯಕ್ರಮದಡಿಯಲ್ಲಿ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಾದಬ್ರಹ್ಮ ಹಂಸಲೇಖ ಅವರ ತರಬೇತಿ ಮತ್ತು ನಿರ್ದೇಶನದ ಅಡಿಯಲ್ಲಿ ದೆಹಲಿಯ ಸುಮಾರು 300ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಸಂಗೀತ, ನಾಟಕ ಮತ್ತು ನೃತ್ಯರೂಪಕಗಳಲ್ಲಿ ಪಾಲ್ಗೊಂಡು ಕಿಕ್ಕಿರಿದು ನೆರೆದಿದ್ದ ದೆಹಲಿಯ ಕನ್ನಡಿಗರನ್ನು ಅತ್ಯಂತ ಸಂತೋಷ ಮತ್ತು ಆನಂದಮಯ ಲೋಕಕ್ಕೆ ಕೊಂಡೊಯ್ದರು.
ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸುಮಾರು 75-80 ಮಂದಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿ, ನಮ್ಮ ದೇಶದ ಹಾಗೂ ರಾಜ್ಯದ ನೂರಾರು ಜನ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಹಾಗೂ ಇಂದಿನ ಭಯೋತ್ಪಾದನೆಯ ಕುರಿತಂತೆ ಒಂದು ಸಂವೇದನಾಶೀಲ ವಸ್ತುವನ್ನು ಒಳಗೊಂಡ ‘ಭರತಭೂಮಿ ವರಪುತ್ರ’ ಎಂಬ ಸಂಗೀತ ನಾಟಕವನ್ನು ಅತ್ಯಂತ ಮನಮುಟ್ಟುವಂತೆ ಅಭಿನಯಿಸಿ ನೆರೆದ ಸಭಿಕರ ಎದೆಯನ್ನು ತಟ್ಟಿದರು. ನಂತರ ನಡೆದ ‘ಹಂಸ ಲೋಕ’ ಸಂಗೀತ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಮಹಿಳೆಯರು ಮತ್ತು ಪುರುಷರು ಹಂಸಲೇಖ ತಂಡದವರ ಸಂಗೀತ ಸಂಯೋಜನೆಯಲ್ಲಿ ಸಿದ್ಧಗೊಂಡ ‘ಹಂಸಲೋಕ’ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಕನ್ನಡದ ಅಂತರರಾಷ್ಟ್ರೀಯ ಖ್ಯಾತಿಯ ವಿಶೇಷ ಚೇತನಗಳಿಗೆ ಅಮೋಘ ನೃತ್ಯ ನಿರ್ದೇಶಕರಾದ ಶ್ರೀ ಸಯ್ಯದ್ ಸಲ್ಲಾವುದ್ದೀನ್ ಪಾಷಾ ಹಾಗೂ ಶಿಕ್ಷಣ ತಜ್ಞ ಮತ್ತು ರಂಗತಜ್ಞ ಡಾ. ಎಸ್.ಎಲ್. ಭಂಡಾರ್‍ಕರ್ ಅವರನ್ನು ದೆಹಲಿ ಕರ್ನಾಟಕ ಸಂಘದ ವತಿಯಿಂದ ಈ ಬಾರಿಯ ವಿಶಿಷ್ಟ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾದಬ್ರಹ್ಮ ಡಾ. ಹಂಸಲೇಖ ಮತ್ತು ಶ್ರೀಮತಿ ಲತಾ ಹಂಸಲೇಖಅವರನ್ನು ಈ ಸಂದರ್ಭದಲ್ಲಿ ಅತ್ಯಂತ ಪ್ರೀತಿ, ಆದರ, ಗೌರವಗಳಿಂದ ಶಾಲು ಹೊದಿಸಿ, ಫಲ ಪುಷ್ಪಾದಿಗಳನ್ನು ನೀಡಿ, ಮೈಸೂರು ಪೇಟ ತೊಡಿಸಿ ಸಂಘದ ವಿಶೇಷ ಸ್ಮರಣಿಕೆಯನ್ನು ನೀಡುವುದರ ಮೂಲಕ ಅಭಿನಂದಿಸಿ ಸನ್ಮಾನಿಸಲಾಯಿತು. ಕನ್ನಡ ಚಲನಚಿತ್ರ ಲೋಕಕ್ಕೆ ಅದ್ಭುತವಾದ ಸಂಗೀತ ನೀಡಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿದ ಡಾ. ಹಂಸಲೇಖ ಅವರು ದೆಹಲಿಯ ಕನ್ನಡಿಗರಿಗೆ ತಮ್ಮ ಮೃದು ಮತ್ತು ಹಾಸ್ಯದಿಂದ ಕೂಡಿದ ಭಾಷೆ ಮತ್ತು ಸಂಭಾಷೆಣೆಗಳಿಂದ ನಗು ನಗುತ್ತಲೇ ಸುಮಾರು ಒಂದು ಗಂಟೆಗಳ ಕಾಲ ಸಂವಾದ ಕಾರ್ಯಕ್ರಮ ನಡೆಸಿ ನೆರೆದ ಸಭಿಕರು ಕೇಳಿದ ಹಲವಾರು ಪ್ರಶ್ನೆಗಳಿಗೆ ಸೂಕ್ಷ್ಮ ಮತ್ತು ಸುಂದರವಾಗಿ ಸ್ಪಂದಿಸಿ ಎಲ್ಲರೂ ಸೇರಿ ಕನ್ನಡವನ್ನು ಬೆಳೆಸಿ ಉಳಿಸುವಂತಾಗಲಿ ಎಂದು ಹಾರೈಸಿದರು. ‘ಕನ್ನಡ ಚಿತ್ರರಂಗ ಅನೇಕ ಪರ ಭಾಷಾ ಕಲಾವಿದರಿಂದ ಮತ್ತು ಸಂಗೀತಗಾರರಿಂದ ತುಂಬಿರುವ ಕಾಲವೊಂದಿತ್ತು ಆದರೆ ಕ್ರಮೇಣ ಕನ್ನಡ ಚಲನಚಿತ್ರ ಸಂಗೀತವು ತನ್ನ ನೆಲೆಯನ್ನು ತಾನೇ ಕಂಡುಕೊಂಡು ವಿಶಿಷ್ಟವಾಗಿ ಬೆಳೆಯಿತು’ ಎಂದು ಡಾ. ಹಂಸಲೇಖ ಅಭಿಪ್ರಾಯಪಟ್ಟರು.
ಕನ್ನಡ ಅಧ್ಯಯನ ಪೀಠ, ಜೆ.ಎನ್.ಯು.ವಿನ ಪುರುಷೋತ್ತಮ ಬಿಳಿಮಲೆ ಅವರು ಸ್ಥಳೀಯ ಕಲಾವಿದರ ಸಂಗೀತ ನಾಟಕವನ್ನು ವೀಕ್ಷಿಸಿದ ನಂತರ ದೆಹಲಿಯಲ್ಲಿ ಇಂತಹ ಒಂದು ಅದ್ಭುತವಾದಂತಹ ನೃತ್ಯರೂಪಕವನ್ನು ಕನ್ನಡ ಅರಿಯದ ಹಲವಾರು ಹೊಸ ತಲೆಮಾರಿನ ಪುಟಾಣಿಗಳನ್ನು ಸೇರಿಸಿಕೊಂಡು ಕನ್ನಡದಲ್ಲಿ ಅವರಿಂದ ಹಾವಭಾವ ಮತ್ತು ಅಭಿವ್ಯಕ್ತಿಯನ್ನು ಮೂಡಿಸಿದ್ದು ಒಂದು ಬಹಳ ಅದ್ಭುತವಾದ ಸಾಧನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಜಯ್ ಹೆಗ್ಡೆ, ಹಿರಿಯ ನ್ಯಾಯವಾದಿಗಳು, ಸುಪ್ರೀಂಕೋರ್ಟ್, ನವದೆಹಲಿ, ದೀಪಕ್ ಶೆಟ್ಟಿ, ಸಾಂಸ್ಕøತಿಕ ಸಂಘಟಕರು, ಬೆಂಗಳೂರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪಡೆದ ಸಯ್ಯದ್ ಸಲ್ಲಾವುದ್ದೀನ್ ಪಾಷಾ ಹಾಗೂ ಡಾ. ಭಂಡಾರ್‍ಕರ್ ಅವರು ಅತ್ಯಂತ ಕೃತಜ್ಞತಾಪೂರ್ವಕವಾಗಿ ದೆಹಲಿ ಕರ್ನಾಟಕ ಸಂಘ ನೀಡಿದ ಈ ವಿಶೇಷ ಗೌರವವನ್ನು ತಮ್ಮ ಜೀವನದ ಒಂದು ಬಹುಮುಖ್ಯ ಘಟನೆ ಹಾಗೂ ನಮ್ಮ ಮುಂದಿನ ಬದುಕಿನಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಸ್ಫೂರ್ತಿದಾಯಕವಾದದ್ದು ಎಂದು ನುಡಿದರು.
ಡಾ ಟಿ.ಸಿ. ಪೂರ್ಣಿಮಾ, ಮೈಸೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮುಖ್ಯಸ್ಥೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೆಹಲಿಯಲ್ಲಿ ಇಂತಹ ಒಂದು ಅತ್ಯುತ್ತಮವಾದ ಕನ್ನಡ ಕಾರ್ಯಕ್ರಮವನ್ನು ನಡೆಸಿ, ಕನ್ನಡ ನಾಡಿನ ನುಡಿ, ಸಂಸ್ಕøತಿಯನ್ನು ಬೆಳೆಸಿ ಉಳಿಸಿಕೊಂಡು ಹೋಗತ್ತಿರುವ ದೆಹಲಿ ಕರ್ನಾಟಕ ಸಂಘದ ಪ್ರಯತ್ನವನ್ನು ಶ್ಲಾಘಿಸಿದರು.
ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ಅವರು ಪ್ರಸ್ತಾವನೆ ಮಾತುಗಳನ್ನು ಆಡಿದರು. ಉಪಾಧ್ಯಕ್ಷೆ ಆಶಾಲತಾ ಅವರು ವಂದನಾರ್ಪಣೆ ಸಲ್ಲಿಸಿದರು, ಕಾರ್ಯಕಾರಿ ಸಮಿತಿಯ ಸದಸ್ಯ ಸಖಾರಾಮ ಉಪ್ಪೂರು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪಡೆದವರ ಮತ್ತು ಡಾ. ಹಂಸಲೇಖ ಅವರ ಕಿರುಪರಿಚಯವನ್ನು ಎನ್.ಪಿ. ಚಂದ್ರಶೇಖರ್ ಅವರು ಮಾಡಿಕೊಟ್ಟರು.