ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಡಾ. ರಾಜೇಂದ್ರಕುಮಾರ್

Spread the love

ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಡಾ. ರಾಜೇಂದ್ರಕುಮಾರ್
 

ಬ್ರಹ್ಮಾವರ: ವಾಣಿಜ್ಯ ಬ್ಯಾಂಕುಗಳು ಸ್ವಾತಂತ್ರ್ಯಾ ನಂತರ ಹುಟ್ಟಿದ್ದರೆ, ಸಹಕಾರಿ ಕ್ಷೇತ್ರ ಸ್ವಾತಂತ್ರ್ಯಕ್ಕೂ ಪೂರ್ವ ದೇಶದಲ್ಲಿ ಅಸ್ತಿತ್ವದಲ್ಲಿತ್ತು. ಇದೀಗ ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ಸರಕಾರಗಳ ಅರಿವಿಗೆ ಬರುತ್ತಿದೆ ಎಂದು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಬ್ರಹ್ಮಾವರ-ಹಾಲಾಡಿ ಮುಖ್ಯ ರಸ್ತೆಯಲ್ಲಿರುವ ಸಾಬ್ರಕಟ್ಟೆಯ ಎಸ್.ಎಸ್. ಕಾಂಪ್ಲೆಕ್ಸ್‌ನ ನೆಲ ಅಂತಸ್ತಿಗೆ ಸ್ಥಳಾಂತರಗೊಂಡ ಸಂಪೂರ್ಣ ಹವಾನಿಯಂತ್ರಿತ ಸಾಬ್ರಕಟ್ಟೆ ಶಾಖೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಹಕಾರಿ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಅರಿವು ಕೇಂದ್ರ ಸರಕಾರಕ್ಕೆ ಮನದಟ್ಟಾಗಿದೆ. ಹೀಗಾಗಿ ಅಮಿತ್ ಶಾ ನೇತೃತ್ವದಲ್ಲಿ ಪ್ರತ್ಯೇಕ ಸಹಕಾರಿ ಖಾತೆ ಪ್ರಾರಂಭಗೊಂಡಿದೆ ಎಂದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಯ ಶತಮಾನೋತ್ಸವವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಹಲವು ಸಹಕಾರಿ ಸಂಘಗಳು ಈಗಲೂ ಕಾರ್ಯಾಚರಿಸುತ್ತಿವೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಾಣಿಜ್ಯ ಬ್ಯಾಂಕುಗಳ ತವರೂರು ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ನಂಥ ಪ್ರಮುಖ ಬ್ಯಾಂಕುಗಳು ನಾಪತ್ತೆ ಆಗಿವೆ. ಈಗಿರುವ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಬಾರದ ಮತ್ತು ಸ್ಥಳೀಯ ಸಂಸ್ಕೃತಿ ತಿಳಿಯದವರೇ ತುಂಬಿದ್ದಾರೆ. ಹೀಗಾಗಿ ಈಗಲೂ ಸ್ಥಳೀಯವಾಗಿಯೇ ಇರುವ ಸಹಕಾರಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಸಹಕಾರಿ ಕ್ಷೇತ್ರ ಇನ್ನೂ ಬೆಳೆಯಲು ಬೇಕಷ್ಟು ಅವಕಾಶಗಳಿವೆ. ಇಂದು ನಗದು ವ್ಯವಹಾರ ಕಡಿಮೆಯಾಗುತ್ತಿರುವುದರಿಂದ ಸಹಕಾರಿ ರಂಗವೂ ತಾಂತ್ರಿಕತೆಯತ್ತ ಮುಖ ಮಾಡಿದೆ. ಇಂದು ಇಲ್ಲಿ ನಮ್ಮ 15ನೇ ಎಟಿಎಂನ್ನು ಸಹ ಉದ್ಘಾಟಿಸಲಾಗಿದೆ.

ಚಕ್ರಬಡ್ಡಿ ವಿಧಿಸುತ್ತಿಲ್ಲ: ಸಹಕಾರಿ ಕ್ಷೇತ್ರ ಸ್ಥಳೀಯ ಜನರ ಕಷ್ಟ-ಸುಖಗಳನ್ನು ಅರಿತು ಅವರ ಸೇವೆಗೆ ಸದಾ ಸನ್ನದ್ಧವಾಗಿದೆ. ಎಸ್‌ಸಿಡಿಸಿಸಿ ಕಳೆದ 25 ವರ್ಷಗಳಿಂದ ರಾಜ್ಯ ಏಳು ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯಸಂಘಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ. ನಾವೆಂದೂ ಅವರ ಮೇಲೆ ಚಕ್ರಬಡ್ಡಿ ವಿಧಿಸುತ್ತಿಲ್ಲ. ಸರಕಾರದ ಸೂಚನೆಯಂತೆ ಶೂನ್ಯ ಬಡ್ಡಿಗೆ ಸಾಲ ನೀಡುತಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾಗಲು ಏನು ಬೇಕೋ ಅದನ್ನೆಲ್ಲಾ ನಾವು ಮಾಡುತಿದ್ದೇವೆ ಎಂದ ರಾಜೇಂದ್ರಕುಮಾರ್, ಮುಂದಿನ ಫೆಬ್ರವರಿ ತಿಂಗಳಲ್ಲಿ ನವೋದಯದ 25ನೇ ವರ್ಷ ಚಾರಣೆಯನ್ನು ಅದ್ದೂರಿಯಾಗಿ ನಡೆಸಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ಕಾರ್ಯಕ್ಷಮತೆಗೆ ಬ್ಯಾಂಕಿನ ಇಂದಿನ ಸಾಧನೆಯೇ ಕೈಗನ್ನಡಿ. ಇವರು ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿಯುವಾಗ 100 ಕೋಟಿ ರೂ. ಇದ್ದ ಡಿಸಿಸಿ ಬ್ಯಾಂಕಿನ ವಹಿವಾಟು ಇಂದು 14,000 ಕೋಟಿ ರೂ.ಗಳಿಗೆ ಏರಿರುವುದೇ ಇದಕ್ಕೆ ಸಾಕ್ಷಿ. 64 ಕೋಟಿ ಇದ್ದ ಠೇವಣಿ ಇಂದು 6500ಕೋಟಿ ರೂ.ಗಳಿಗೇರಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕರಾವಳಿ ಜಿಲ್ಲೆಗಳ ಸಹಕಾರಿ ಸಂಘಗಳಿಗೆ ಪ್ರೇರಣೆ ನೀಡುತ್ತಾ ಸಂಸ್ಥೆಯನ್ನು ದೇಶದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ರಾಜೇಂದ್ರಕುಮಾರರಿಗೆ ಸಲ್ಲುತ್ತದೆ ಎಂದರು.

ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಅವರು ಶುಭಾಶಂಸನೆ ಮಾಡಿದರು. ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಪ್ರದೀಪ್ ಬ್ಲಾಳ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೊಸ ಠೇವಣಿ ಪತ್ರಗಳನ್ನು ವಿತರಿಸಲಾ ಯಿತು. ಸ್ವಸಹಾಯ ಸಂಘಗಳಿಗೆ ಸಾಲಪತ್ರವನ್ನು ವಿತರಿಸ ಲಾಯಿತಲ್ಲದೇ, ಹೊಸ ಸ್ವಸಹಾಯ ಸಂಘಗಳಿಗೆ ಚಾಲನೆಯನ್ನು ನೀಡಲಾಯಿತು.

ವೇದಿಕೆಯಲ್ಲಿ ಎಸ್‌ಸಿಡಿಸಿಸಿಯ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಗೋಪಾಲಕೃಷ್ಣ ಭಟ್ ಕೆ., ನಿರ್ದೇಶಕರಾದ ರಾಜು ಪೂಜಾರಿ, ರಾಜೇಶ್ ರಾವ್ ಪಾಂಗಾಳ, ರಾಜಾರಾಮ್ ಭಟ್, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕಕುಮಾರ್ ಶೆಟ್ಟಿ, ಕೆ.ಹರಿಶ್ಚಂದ್ರ ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ದಾಮೋದರ ಶರ್ಮ ಅವರು ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments