ಸಹಕಾರ ಇಲಾಖೆಯ ಕಲಂ 64 ಶಾಸನಬದ್ಧ ವಿಚಾರಣೆಗೆ ಬದ್ಧ : ಮಹಾಲಕ್ಷ್ಮೀ ಬ್ಯಾಂಕ್
ಉಡುಪಿ: ಮಹಾಲಕ್ಷ್ಮೀ ಬ್ಯಾಂಕ್ ಸಾಲ ಮಂಜೂರಾತಿ ಪ್ರಕ್ರಿಯೆ ಬಗ್ಗೆ ಸಹಕಾರ ಇಲಾಖೆಯ ಕಲಂ 64 ರಡಿ ಶಾಸನಬದ್ಧ ವಿಚಾರಣೆ ನಡೆಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರ ಆದೇಶವನ್ನು ಸ್ವಾಗತಿಸಿ, ಇಲಾಖೆಯ ವಿಚಾರಣೆಗೆ ಬದ್ಧರಾಗಿರುವುದಾಗಿ ಮಹಾಲಕ್ಷ್ಮೀ ಬ್ಯಾಂಕ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿನ ಮೇಲೆ ಆಧಾರರಹಿತ ಆರೋಪ ಬಂದಾಗಲೇ ಯಾವುದೇ ಉನ್ನತ ಮಟ್ಟದ ತನಿಖೆಗೂ ಸಿದ್ಧವಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದು, ಬ್ಯಾಂಕ್ ಇಲಾಖೆಯ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದೆ.
ಕಲಂ 64 ರಡಿ ವಿಚಾರಣೆಯ ಮೂಲಕ ಆಧಾರರಹಿತ ಆರೋಪದ ಸತ್ಯಾಸತ್ಯತೆಯ ಗೊಂದಲ ನಿವಾರಣೆಯಾಗಲಿದ್ದು, ಬ್ಯಾಂಕಿನ ಪಾರದರ್ಶಕ ಕಾರ್ಯವೈಖರಿಯ ಬಗ್ಗೆ ಗ್ರಾಹಕರು ಮತ್ತು ಸದಸ್ಯರಿಗೆ ನೈಜ ಚಿತ್ರಣ ತಿಳಿಯಲಿದೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಬೆಳವಣಿಗೆಯನ್ನು ಸಹಿಸದೆ, ಕೆಲವು ಪೂರ್ವಗ್ರಹಪೀಡಿತ ವ್ಯಕ್ತಿಗಳು ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕಾಗೋಷ್ಟಿ ನಡೆಸುತ್ತಾ ಆಧಾರರಹಿತ ಆರೋಪ ಮಾಡುತ್ತಿದ್ದು ಈ ಬಗ್ಗೆ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲು ಬ್ಯಾಂಕ್ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಆದೇಶ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅವ್ಯವಹಾರ ಕುರಿತು ‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ನಿಬಂಧಕರು ಆದೇಶ ನೀಡಿರುವುದು ಸಂತ್ರಸ್ತರು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿರುವ ಸತತ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವಾಗಿದೆ ಎಂದು ಪತ್ರಿಕಾಗೋಷ್ಠಿಯ ಮೂಲಕ ಶುಕ್ರವಾರ ಸಂತ್ರಸ್ತರು ತಿಳಿಸಿದ್ದರು
ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ‘ಕಲಂ 64’ರಡಿಯಲ್ಲಿ ವಿಚಾರಣೆ ನಡೆಸುವಂತೆ ಸಂತ್ರ ಸ್ತರು ಬೆಂಗಳೂರಿನಲ್ಲಿ ಸಹಕಾರಿ ಸಚಿವರನ್ನು ಹಾಗೂ ಸಹಕಾರಿ ಸಂಘಗಳ ನಿಬಂಧಕರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಗ್ರ ತನಿಖೆಗೆ ಒತ್ತಾಯಿಸಿತ್ತು. ಇದೀಗ ಸರಕಾರ, ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ರ ಪ್ರಕಾರ ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕರನ್ನು ವಿಚಾರಣೆಗಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಎಲ್ಲಾ ಲೋಪಗಳ ಬಗ್ಗೆ ವಿಚಾರಣೆಗೆ ಸರಕಾರ ಆದೇಶಿಸಿದ್ದು, ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಸಂತ್ರಸ್ತ ಗ್ರಾಹಕರು ತಿಳಿಸಿದ್ದಾರೆ