ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ

Spread the love

ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ

ಉಡುಪಿ: ಸಹಬಾಳ್ವೆ ಸಂಘಟನೆ ಉಡುಪಿ ವತಿಯಿಂದ ಮಾರ್ಚ್ 17 ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಆಯೋಜಿಸಿರುವ “ಸರ್ವ ಜನೋತ್ಸವ”ಸಮಾವೇಶದ ಕಚೇರಿಯನ್ನು ಉಡುಪಿ ಮಿತ್ರ ಆಸ್ಪತ್ರೆಯ ಬಳಿ ಇರುವ ಸಿತಾರಾ ಕಾಂಪ್ಲೆಕ್ಸ್ ಇದರಲ್ಲಿ ಬುಧವಾರ ಉದ್ಘಾಟನೆ ಮಾಡಲಾಯಿತು.

ಕಚೇರಿಯನ್ನು ಮಾಜಿ ಸಚಿವ ಹಾಗೂ ಕಾಪು ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ವಿನಯ್ ಕುಮಾರ್ ಸೊರಕೆ ಉಡುಪಿ ಜಿಲ್ಲೆ ಈ ನಾಡಿಗೆ ಹಾಗೂ ದೇಶಕ್ಕೆ ಸಹಬಾಳ್ವೆಯ ಸಂದೇಶವನ್ನು ದಶಕಗಳ ಹಿಂದೆಯೆ ನೀಡಿ ಹೆಸರುವಾಸಿಯಾಗಿದೆ. ಈ ಜಿಲ್ಲೆ ಸರ್ವ ಧರ್ಮಗಳು ಶಾಂತಿಯಿಂದ ಬದಕಲು ಅವಕಾಶ ನೀಡಿ ಮಾದರಿಯಾಗಿದೆ. ಜಿಲ್ಲೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಬ್ಯಾಂಕಿಂಗ್ ವಿದ್ಯಾಕ್ಷೇತ್ರ, ಸಮಾಜಸೇವೆ, ಆರೋಗ್ಯ ಕ್ಷೇತ್ರ ಹೀಗೆ ಎಲ್ಲಾ ವಿಧದಲ್ಲಿಯೂ ಕೂಡ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿಕೊಂಡು ಬಂದಿದೆ.

ಉಡುಪಿಯ ಕೃಷ್ಣ ಮಠ ಜಗತ್ತಿನ ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿದ್ದು, ಒಂದು ಕಾಲದಲ್ಲಿ ಲಕ್ಷದೀಪೋತ್ಸವಕ್ಕೆ ಎಣ್ಣೆ ಕಡಿಮೆಯಾದಾಗ ಹಾಜಿ ಅಬ್ದುಲ್ಲಾ ಸಾಹೇಬರು ಎಣ್ಣೆಯನ್ನು ದಾನ ನೀಡುವುದರ ಮೂಲಕ ಸಹಬಾಳ್ವೆಯ ಸಂದೇಶವನ್ನು ಸಾರಿದ್ದರು. ಅಲ್ಲದೆ ಉಡುಪಿಯ ಚರ್ಚು ಮತ್ತು ಕೃಷ್ಣ ಮಠಕ್ಕೆ ಕೂಡ ಅವಿನಾಭಾವ ಸಂಬಂಧಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಕೋಮು ಪ್ರಚೋದಿತ ಘಟನೆಗಳು ನಡೆದರೂ ಕೂಡ ಉಡುಪಿ ಜಿಲ್ಲೆ ಮಾತ್ರ ಅಂತಹ ಘಟನೆಗಳಿಗೆ ಎಂದಿಗೂ ಕೂಡ ಸಾಕ್ಷಿಯಾಗದೆ ಸದಾ ಎಲ್ಲಾ ಧರ್ಮಗಳು ಕೂಡ ಸಹಬಾಳ್ವೆಯಿಂದ ಬದುಕಿ ತೋರಿಸಿ ಇತರರಿಗೆ ಮಾದರಿಯಾಗಿದೆ.

ಅದರೆ ಇತ್ತೀಚೆಗೆ ಕೆಲವೊಂದು ಸಂಕುಚಿತ ಭಾವನೆಯ ವ್ಯಕ್ತಿಗಳಿಂದ ಎಲ್ಲಿಯೋ ಒಂದು ಕಡೆ ಸಹಬಾಳ್ವೆ ಎಂಬ ಪದಕ್ಕೆ ಚ್ಯುತಿ ಬರುತ್ತಿದ್ದು ಉಡುಪಿ ಜಿಲ್ಲೆ ಮುಂದೆಯೂ ಶಾಂತಿ ಸಹಬಾಳ್ವೆಯಿಂದ ಇರಬೇಕು ಎಂಬ ನಿಟ್ಟಿನಲ್ಲಿ ಸರ್ವಜನೋತ್ಸವ ಸಮಾವೇಶವನ್ನು ಆಯೋಜಿಸಿದ್ದು ಎಲ್ಲಾ ಜಾತಿ ಧರ್ಮದ ಸಮಾನ ಚಿಂತನೆಯ ವ್ಯಕ್ತಿಗಳು ಇದರೊಂದಿಗೆ ಕೈಜೋಡಿಸಿದ್ದು ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಲು ಸಮಾವೇಶ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಭಾಗವಹಿಸಿದ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ ಉಡುಪಿ ಜಿಲ್ಲೆಗೆ ತನ್ನದೇ ಆದ ಹೆಸರಿದೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಮುದಾಯಗಳನ್ನು ತಿರಸ್ಕಾರ ಮನೋಭಾವದಿಂದ ನೋಡಿ ಪರಸ್ಪರ ಅಪನಂಬಿಕೆ ಮೂಡಿಸುವ ಕೆಲಸವನ್ನು ಒಂದು ವರ್ಗ ಮಾಡಿಕೊಂಡು ಬರುತ್ತಿದ್ದು ಇದರಿಂದ ಎಲ್ಲರೂ ಹೊರಬಂದು ನಾವೆಲ್ಲರೂ ಒಂದು ಎನ್ನುವ ಭಾವನೆ ಮೂಡಿಸುವ ಕೆಲಸ ಸರ್ವ ಜನೋತ್ಸವದಿಂದ ನಡೆಯಬೇಕಾಗಿದೆ ಎಂದರು.

ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಕೆಪಿಸಿಸಿ ಉಸ್ತುವಾರಿ ಜಿ ಎ ಬಾವಾ, ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ ರಾಜಶೇಖರ್ ಮಾತನಾಡಿ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ಕೋರಿದರು.

ಸಹಬಾಳ್ವೆ ಸಂಘಟನೆಯ ಸಂಚಾಲಕ ಅಮೃತ್ ಶೆಣೈ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಹಾಗೂ ಜಾತ್ಯಾತೀತ ಮನೋಭಾವದ ಎಲ್ಲಾ ಪಕ್ಷಗಳು ಮತ್ತು ಸಂಘಟನೆಗಳು ಸಮಾವೇಶಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದು, ಮಾರ್ಚ್ 17 ರಂದು ಕಲ್ಸಂಕ ರಾಯಲ್ ಗಾರ್ಡನ್ ಬಳಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವರಾದ ಡಿ ಕೆ ಶಿವಕುಮಾರ್, ಜೆಡಿಎಸ್ ನಾಯಕ ವೈ ಎಸ್ ವಿ ದತ್ತ, ಸಿಪಿಐ ಎಮ್ ನಾಯಕರಾದ ಸೀತಾರಾಮ್ ಯೆಚೂರಿ, ಚಿಂತಕರಾದ ದಿನೇಶ್ ಅಮೀನ್ ಮಟ್ಟು ಹಾಗೂ ಇತರರು ಭಾಗವಹಿಸುವ ನಿರೀಕ್ಷೆ ಇದ್ದು, ಸುಮಾರು 20000 ಜನರನ್ನು ಸೇರಿಸಲು ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಾಯಕರುಗಳಾದ ಗಣೇಶ್ ನೆರ್ಗಿ, ಪ್ರಶಾಂತ್ ಜತ್ತನ್ನ, ಅನ್ಸಾರ್ ಅಹ್ಮದ್, ರೋಶನಿ ಒಲಿವೇರಾ, ವೆರೋನಿಕಾ ಕರ್ನೆಲಿಯೋ, ಭಾಸ್ಕರ್ ರಾವ್ ಕಿದಿಯೂರು, ಮಹಮ್ಮದ್ ಮೌಲಾ, ನಾರಾಯಣ ಕುಂದರ್, ರೋಹಿತ್ ಕರಂಬಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love