ಸಹೋದರಿಯರ ಸೃಷ್ಟಿ-ನಲ್ವತ್ತು ದ್ವೀಪಗಳು

Spread the love

ಸಹೋದರಿಯರ ಸೃಷ್ಟಿ-ನಲ್ವತ್ತು ದ್ವೀಪಗಳು

ಹೆಬ್ರಿ ಆಗುಂಬೆ ಬಳಿ ಹುಟ್ಟೋ ಸೀತೆ. ಕಾರ್ಕಳದ ಮಾಳ ಪರಿಸರದಲ್ಲಿ ಮೊದಲ ಹರಿವನ್ನು ಕಾಣುವ ಸುವರ್ಣೆ. ಇವೆರಡೂ ಉಡುಪಿ ಜಿಲ್ಲೆಯ ಜೀವ ನದಿಗಳು. ಹುಟ್ಟುವ ಜಾಗ ಬೇರೆಯದೇ ಆಗಿದ್ದರೂ ಅವು ಸಮುದ್ರ ಸೇರುವುದು ಒಂದೇ ಕಡೆ. ಪ್ರಾಚೀನ ಪ್ರಸಿದ್ಧ ಬಂದರು ಹಂಗಾರಕಟ್ಟೆಯ ಬಳಿ. ಹೀಗೆ ಈ ಸಹೋದರಿಯರು ಸಂಗಮವಾಗುವ ಜಾಗದಲ್ಲಿ ನಲ್ವತ್ತಕ್ಕೂ ಹೆಚ್ಚು ದ್ವೀಪಗಳನ್ನು ಸೃಷ್ಟಿಸಿವೆ. ಹೆಚ್ಚಿನ ಎಲ್ಲಾ ಕುದ್ರುಗಳಲ್ಲಿ ಜನವಸತಿಯಿದೆ. ಬೆಳಕಿಗೆ ಒಂಚೂರೂ ಎಡೆಯಿಲ್ಲದಂತೆ ಬೆಳೆದ ತೆಂಗಿನ ತೋಟಗಳಿವೆ. ಸಮುದ್ರದ ಹಿನ್ನೀರು ಮತ್ತು ಮಳೆಗಾಲದ ಉಕ್ಕಿನಿಂದಾಗಿ ಇದು ವರುಷ ಪೂರ್ತಿ ದ್ವೀಪವೇ.

image001kemmannu-icelands-udupi20160603

ಪರಂಗಿ ಕುದುರು, ಕಿಣಿಯರ ಕುದುರು, ಕಡ್ತ ಕುದುರು, ತಿಮ್ಮಣ ಕುದುರು, ಶ್ರೀನಿವಾಸ ಕುದುರು, ಮೂಡು, ಪಡು, ಬೆಣ್ಣೆ ಕುದುರು, ಹೊನ್ನಪ್ಪರ ಕುದುರು, ನಡು ಕುದುರು, ಪಡುಕುಕ್ಕುಡೆ ಕುದುರು, ಚಿತ್ತರ್, ಕಟ್ಟೆ, ಬಾಳಿಗರ ಕುದುರು. ಹೀಗೆ ವಿವಿಧ ಹೆಸರಿನಿಂದ ಕರೆಯಲ್ಪಡುವ ಇಲ್ಲಿನ ದ್ವಿಪಗಳಲ್ಲಿ ಒಂದು ದ್ವೀಪಕ್ಕೆ ತೂಗು ಸೇತುವೆ, ಎರಡು ಕುದ್ರುಗಳಿಗೆ ಪಕ್ಕಾ ಸೇತುವೆ, ಮತ್ತೆ ನಾಲ್ಕೈದು ದ್ವೀಪಗಳಿಗೆ ಮರದ ಸೇತುವೆಗಳಿವೆ. ಉಳಿದ ಎಲ್ಲಾ ದ್ವೀಪಗಳಿಗೆ ನಾಡದೋಣಿಯೇ ಆಧಾರ.

image002kemmannu-icelands-udupi20160603

ಸುಮಾರು 350 ವರುಷಗಳ ಹಿಂದಿನಿಂದ ಈ ದ್ವೀಪಗಳಲ್ಲಿ ಜನವಸತಿ ಆರಂಭವಾಗಿರುವುದಕ್ಕೆ ಕುರುಹುಗಳಿವೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮಗಳ ಜನರೂ ಇಲ್ಲಿ ವಾಸವಾಗಿದ್ದಾರೆ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಮನೆಯಂಗಳದವರೆಗೆ ನೀರು ಬಂದಿದ್ದು ಬಿಟ್ಟರೆ ಇಡೀ ದ್ವೀಪ ನೀರುಪಾಲಾದ ಉದಾಹರಣೆ ಇಲ್ಲಿಲ್ಲ. ಹಾಗಾಗಿ ಯಾರೊಬ್ಬರಿಗೂ ಇಲ್ಲಿ ನೀರಿನ ಭಯವಿಲ್ಲ. ಉಪ್ಪು ನೀರನ್ನು ಹೀರಿ ಬೆಳೆದ ಸಿಹಿ ನೀರಿನ ತೆಂಗಿಗೆ ಎಲ್ಲಿಲ್ಲದ ಬೇಡಿಕೆ. ಉಳಿದಂತೆ ಮೀನುಗಾರಿಕೆ, ಮರಳುಗಾರಿಕೆ ಈ ದ್ವೀಪದ ಜನರ ಮೂಲಕಸುಬು. ಬದಲಾವಣೆಯೊಂದಿಗೇ ಬದಲಾಗುತ್ತಿರುವ ಇಲ್ಲಿನ ದ್ವೀಪವಾಸಿಗಳು ಇಡೀ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಆಧುನಿಕ ಉದ್ಯೋಗ, ವ್ಯಾಪರಗಳಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.

image003kemmannu-icelands-udupi20160603

ಈ ದ್ವೀಪದ ಮಂದಿ ರಸ್ತೆ, ಸಾರಿಗೆ, ಸಂಪರ್ಕ, ವಿದ್ಯುತ್ ಸೌಲಭ್ಯಗಳ ಕೊರತೆ ಇದ್ದರೂ ಶಿಕ್ಷಣದಿಂದ ದೂರ ಸರಿದವರಲ್ಲ. ಆಧುನಿಕ ಶಿಕ್ಷಣ ಆರಂಭವಾಗುತ್ತಿದ್ದಂತೆ ಮಕ್ಕಳಿಗೆ ಕೆಮ್ಮಣ್ಣು, ಹೂಡೆ, ಕಲ್ಯಾಣಪುರ, ಬ್ರಹ್ಮಾವರದ ಶಾಲೆಗಳಿಗೆ ಕಳುಹಿಸಿ ಅಕ್ಷರ ಕಲಿಸಿದ್ದಾರೆ. ಉನ್ನತ ಶಿಕ್ಷಣವನ್ನೂ ಈ ದ್ವೀಪದ ವಾಸಿಗಳು ಪಡೆದವರಿದ್ದಾರೆ. ದೇಶ ವಿದೇಶಗಳಲ್ಲಿ, ವಿವಿಧ ನಗರಗಳಲ್ಲಿ ಕೆಲಸ ಪಡೆದು ಅಲ್ಲೇ ಮನೆಮಾಡಿಕೊಂಡವರಿದ್ದಾರೆ. ಈ ದ್ವೀಪಗಳಲ್ಲಿದ್ದ ತಮ್ಮ ತಂದೆ ತಾಯಿ ಹಿರಿಯರನ್ನೂ ತಮ್ಮ ಪೇಟೆಯ ಮನೆಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ದ್ವೀಪದಲ್ಲಿದ್ದ ಅದೆಷ್ಟೋ ಮನೆಗಳು ಇಂದು ಖಾಲಿಯಾಗುತ್ತಿವೆ. ಒಂದೆರಡು ಮನೆಗಳು ಮಾತ್ರವಿದ್ದ ಕೆಲವು ದ್ವೀಪಗಳಿಂದು ಇಡಿಯಾಗಿ ಮಾರಾಟಕ್ಕಿವೆ.

image004kemmannu-icelands-udupi20160603

ಕರಾವಳಿಯ ನಿಜವಾದ ಸೌಂದರ್ಯ ಸವಿಯಲು ಬಯಸುವವರು ಈ ದ್ವೀಪಗಳಿಗೊಮ್ಮೆಯಾದರು ಭೇಟಿಯಾಗಲೇಬೇಕು. ಉಡುಪಿಯಿಂದ ಸಂತೆಕಟ್ಟೆ. ಅಲ್ಲಿಂದ ಎಡಕ್ಕೆ ಒಂದು ಕಿ.ಮೀ ಸಾಗಿದರೆ ಸಿಗುವ ಊರು ನೇಜಾರು. ಅಲ್ಲಿ ಬಲಕ್ಕೆ ಕೆಳ ನೇಜಾರಿನ ಮೂಲಕ ಕೆಮ್ಮಣ್ಣು ಪಡುತೋನ್ಸೆಯನ್ನು ತಲಪಬೇಕು. ತೆಂಗಿನ ಮರಗಳ ನಡುವೆ ನಿರ್ಮಿಸಲಾಗಿರುವ ರಸ್ತೆಯ ಮೇಲೆ ಸಾಗುವುದೇ ಒಂದು ಖುಷಿ. ಪಡುತೋನ್ಸೆಯಲ್ಲಿ ಸುಂದರ ತೂಗುಸೇತುವೆ ಇದೆ. ಅದರ ಮೇಲೆ ನಡೆಯುವುದೇ ರೋಮಾಂಚನವಾದರೆ ಅಲ್ಲಿನ ನಾಡದೋಣಿಯಲ್ಲಿ ನದಿಯೊಳಗೆ ಇಳಿದು ಒಂದೆರಡು ಗಂಟೆ ಒಂದಷ್ಟು ದ್ವೀಪಗಳನ್ನು ಸುತ್ತು ಹಾಕುವುದು, ಹಂಗಾರಕಟ್ಟೆ ಬಂದರನ್ನು ನೋಡಿ ಬರುವುದು, ಸುವರ್ಣಾ ಸೀತೆಯರಿಬ್ಬರೂ ಸಮುದ್ರ ಸೇರುವ ಸೊಬಗನ್ನು ದೋಣಿಯಲ್ಲಿ ಕೂತೇ ಕಣ್ತುಂಬಿಸಿಕೊಳ್ಳೋದು ಸ್ವರ್ಗ ಸಮಾನ ಸುಖ.
ಪಡುತೋನ್ಸೆಯಲ್ಲಿ ಸತ್ಯಣ್ಣ ಎನ್ನವವರದೊಂದು ಗುಡಿಸಲಿದೆ. ಅವರದೊಂದು ನಾಡ ದೋಣಿ. ಮೀನು, ಮರಳುಗಾರಿಕೆ ಕಾಯಕವಾದರೂ ಬರುವ ಪ್ರವಾಸಿಗರಿಗೆ ಇಷ್ಟ ಬಂದಷ್ಟು ಹೊತ್ತು ನದಿಯನ್ನು ತೋರಿಸುತ್ತಾರೆ. ದ್ವೀಪಗಳ ಕಥೆಯನ್ನು ಹೇಳುತ್ತಾರೆ. ಯಾವ್ಯಾವ ದ್ವೀಪದಲ್ಲಿ ಎಷ್ಟೆಷ್ಟು ಮನೆಗಳಿವೆ. ಅವುಗಳಲ್ಲಿ ಯಾವುದೆಲ್ಲಾ ಖಾಲಿ ಇವೆ. ಯಾವುದೆಲ್ಲಾ ಸೇಲಿಗಿವೆ ಎಂಬೆಲ್ಲಾ ಮಾಹಿತಿಗಳು ಅವರಲ್ಲಿವೆ. ಅವರ ದೋಣಿಯಲ್ಲಿ ಒಮ್ಮೆಗೆ ಹತ್ತು ಜನ ಪ್ರಯಾಣಿಸಬಹುದು. ದಡ ಸೇರಿದ ಮೇಲೆ ಅವರ ಬೆವರು ಸುರಿಸಿದ ಪ್ರಮಾಣಕ್ಕೆ ತಕ್ಕಂತೆ ಹಣ ಕೇಳುತ್ತಾರೆ. ಇನ್ನೂರು, ಮನ್ನೂರು ಹೆಚ್ಚಂದರೆ ಐನೂರು. ಒಬ್ಬೊಬ್ಬರಿಗಲ್ಲ. ಇಡೀ ಒಂದು ದೋಣಿಗೆ, ಒಂದು ಹೊತ್ತಿಗೆ.
ಸತ್ಯಣ್ಣನ ದೋಣಿ ವಿಹಾರದಲ್ಲಿ ಅತ್ಯಂತ ಆಕರ್ಷಕವಾದುದೆಂದರೆ ಮೀನುಗಳ ಹಾರಟ. ಸಂಜೆಯ ಇಳಿತದ ಹೊತ್ತು ದೋಣಿ ಹತ್ತಿರವಾದಂತೆ ಮೀನುಗಳು ಒಮ್ಮೆಗೆ ಹಾರುತ್ತವೆ. ನೆಗೆಯುತ್ತವೆ. ಕೆಲವೊಮ್ಮೆಯಂತೂ ನೂರಾರು ಮೀನುಗಳು ಒಟ್ಟೊಟ್ಟಿಗೇ ಜಿಗಿಯುತ್ತವೆ. ಆ ಹೊತ್ತು ಸೂರ್ಯಾಸ್ತದ್ದಾಗಿದ್ದರೆ ಹಾರುವ ಮೀನುಗಳೆಲ್ಲಾ ಚಿನ್ನದಂತೆ ಹೊಳೆಯುತ್ತವೆ.
ಕೇರಳದಲ್ಲಾಗಿದ್ದರೆ ಈ ದ್ವೀಪ ಪ್ರದೇಶ ಈ ವರೆಗೆ ವಿಶ್ವಪ್ರಸಿದ್ದ ವಾಗುತ್ತಿತ್ತೇನೋ. ಪ್ರವಾಸೋದ್ಯಮ ಬೆಳೆಯುತ್ತಿತ್ತು. ಆದರೆ ಕರ್ನಾಟಕ ಸರಕಾರ ಕರಾವಳಿಯಲ್ಲಿ ಇಷ್ಟೊಂದು ಸೌಂದರ್ಯದ ಗಣಿಯೇ ಇದ್ದರೂ ಪ್ರವಾಸೋದ್ಯಮವನ್ನು ನಿರ್ಲಕ್ಷಿಸಿದಂತಿದೆ. ಇಲ್ಲಿನ ಒಂದೆರಡು ದ್ವೀಪಗಳಲ್ಲಿ ಖಾಸಗಿ ರೆಸಾರ್ಟುಗಳಿವೆ. ಕೇರಳ ಮಾದರಿಯ ಬೋಟ್ ಹೌಸುಗಳೂ ಇವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಇಲ್ಲಿ ಬೆಳೆದಿಲ್ಲ. ಪರಿಸರ, ಸೌಂದರ್ಯ, ಜನ ವಸತಿಗೆ ಮಾರಕವಾಗದ ರೀತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು, ದೇಶ ವಿದೇಶದ ಪ್ರವಾಸಿಗರನ್ನು ಆಕರ್ಶಿಸಲು ಸಾಕಷ್ಟು ಅವಕಾಶಗಳು ಇಲ್ಲಿವೆ. ಈ ಪರಿಸರದ ಮೌನಕ್ಕೆ, ಏಕಾಂತಕ್ಕೆ ಅಡ್ಡಿಯಾಗದ ಅಭಿವೃದ್ಧಿ ಅದೆಷ್ಟು ಆದರೂ ಲಾಭವೇ.

ಬರಹ: ಮಂಜುನಾಥ್ ಕಾಮತ್, ಮುಖ್ಯಸ್ಥರು ಪತ್ರಿಕೋದ್ಯಮ ವಿಭಾಗ ಎಂಜಿಎಮ್ ಕಾಲೇಜು, ಉಡುಪಿ


Spread the love