ಸಾಂಕ್ರಾಮಿಕ ರೋಗಗಳ ಮಾಹಿತಿ ಪ್ರತೀ ದಿನ ನೀಡುವುದು ಕಡ್ಡಾಯ – ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ
ಮಂಗಳೂರು : ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬೋಟರಿ ಹಾಗೂ ಚಿಕಿತ್ಸಾಲಯಗಳು ತಮ್ಮ ರೋಗಿಗಳ ಪರೀಕ್ಷೆಯಲ್ಲಿ ಅವರಿಗೆ ಡೆಂಗ್ಯೂ ಅಥವಾ ಯಾವುದೇ ಸಾಂಕ್ರಾಮಿಕ ರೋಗ ಇರುವುದು ಕಂಡು ಬಂದರೆ ಆಯಾ ದಿನದಂತೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಪ್ರತೀದಿನ ಮದ್ಯಾಹ್ನ 2.30 ಗಂಟೆಯೊಳಗೆ ಮಾಹಿತಿಯನ್ನು ನೀಡಬೇಕು. ರೋಗ ನಿಯಂತ್ರಣಕ್ಕೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಮಾಹಿತಿ ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಸಕಾಲಕ್ಕೆ ಮಾಹಿತಿ ನೀಡಲು ವಿಫಲವಾದರೆ ಅಂತಹ ಆಸ್ಪತ್ರೆ, ಪ್ರಯೋಗಾಲಯಗಳ ವಿರುದ್ಧ ಕೆಪಿಎಂಇಎ ಕಾಯಿದೆಯನ್ವಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಮಹಾನಗರಪಾಲಿಕೆ ಜಂಟೀ ಆಯುಕ್ತೆ ಗಾಯತ್ರಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.