ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿರುವ ವಕ್ಫ್ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಬಾರದು : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

Spread the love

ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿರುವ ವಕ್ಫ್ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಬಾರದು : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

ಉಡುಪಿ: ಮೋದಿ ಸರಕಾರ ತಂದಿರುವ ವಕ್ಫ್ ತಿದ್ದುಪಡಿ ಮಸೂದೆ ನಮ್ಮ ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುವ ಮಸೂದೆಯಾಗಿದೆ. ಇದು ವಕ್ಫ್ ಸೊತ್ತುಗಳನ್ನು ಸಂರಕ್ಷಿಸುವ, ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುವ ಹೆಸರಿನಲ್ಲಿ ವಕ್ಫ್ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಹುನ್ನಾರವಾಗಿದೆ. ಈ ಸಂವಿಧಾನ ವಿರೋಧಿ ಮಸೂದೆಗೆ ಮಾನ್ಯ ರಾಷ್ಟ್ರಪತಿಯವರು ಅಂಕಿತ ಹಾಕಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಮೌಲಾ ಆಗ್ರಹಿಸಿದ್ದಾರೆ.

ಬಿಜೆಪಿ, ಸಂಘ ಪರಿವಾರ ಹಾಗು ಅವರ ಐಟಿ ಸೆಲ್ ಮೊದಲು ಮುಸ್ಲಿಮರು ಹಾಗು ವಕ್ಫ್ ಭೂಮಿ ಕುರಿತು ವ್ಯವಸ್ಥಿತ ಅಪಪ್ರಚಾರ ಅಭಿಯಾನ ನಡೆಸುತ್ತಾರೆ. ವಕ್ಫ್ ಸೊತ್ತುಗಳ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಹರಡುತ್ತಾರೆ. ಆ ಮೂಲಕ ಸಮಾಜದಲ್ಲಿ, ದೇಶದಲ್ಲಿ ಮುಸ್ಲಿಮರು ಹಾಗು ವಕ್ಫ್ ವಿರುದ್ಧ ಒಂದು ಸುಳ್ಳು ನರೇಟಿವ್ ಅನ್ನು ಸೃಷ್ಟಿಸುತ್ತಾರೆ. ಅದರ ಬೆನ್ನಿಗೇ ಇಂತಹದೊಂದು ಸಂವಿಧಾನ ವಿರೋಧಿ, ಜಾತ್ಯತೀತ ತತ್ವಗಳ ವಿರೋಧಿ ಮಸೂದೆಯನ್ನು ಸಂಸತ್ತಿನಲ್ಲಿ ತಂದು ಪಾಸ್ ಮಾಡುತ್ತಾರೆ. ಅದಕ್ಕಾಗಿ ತಥಾಕತಿಥ ಜಾತ್ಯತೀತ ಪಕ್ಷಗಳ ಬೆಂಬಲವನ್ನೂ ಪಡೆದು ಅವುಗಳ ಬಂಡವಾಳವನ್ನು ಬಯಲು ಮಾಡುತ್ತಾರೆ. ಇದು ಈಗಾಗಲೇ ಮೋದಿ ಸರಕಾರ ಹಾಗು ಸಂಘ ಪರಿವಾರದ ದ್ವೇಷ ರಾಜಕೀಯದಿಂದ ಅಂಚಿಗೆ ತಳ್ಳಲ್ಪಟ್ಟಿರುವ ಮುಸ್ಲಿಂ ಸಮುದಾಯವನ್ನು ಇನ್ನಷ್ಟು ಗುರಿಯಾಗಿಸುವ, ಅವರನ್ನು ‘ಅನ್ಯರು’ ಎಂಬಂತೆ ಬಿಂಬಿಸುವ, ಅವರ ವಕ್ಫ್ ಸೊತ್ತುಗಳನ್ನು ಆಕ್ರಮಿಸುವ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.

ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುತ್ತೇವೆ, ವಕ್ಫ್ ಸೊತ್ತನ್ನು ಸಮರ್ಪಕವಾಗಿ ಮುಸ್ಲಿಮರ ಪ್ರಯೋಜನಕ್ಕಾಗಿ ಬಳಸುತ್ತೇವೆ, ಭ್ರಷ್ಟಾಚಾರವನ್ನು ನಿಗ್ರಹಿಸುತ್ತೇವೆ ಎಂದು ಹೇಳುತ್ತಿರುವ ಮೋದಿ ಸರಕಾರ ಈ ಮಸೂದೆಯಲ್ಲಿ ಅದಕ್ಕೆ ತೀರಾ ತದ್ವಿರುದ್ಧವಾದ ಅಂಶಗಳನ್ನೇ ಯಾಕೆ ತಂದಿದೆ ಎಂಬುದಕ್ಕೆ ಉತ್ತರ ನೀಡಬೇಕಿದೆ. ವಕ್ಫ್ ಬೋರ್ಡ್ ಅನ್ನು ಹಾಗು ವಕ್ಫ್ ನ್ಯಾಯ ಮಂಡಳಿಯನ್ನು ದುರ್ಬಲವಾಗಿಸುವ ಮೂಲಕ ಹೇಗೆ ವಕ್ಫ್ ಆಡಳಿತವನ್ನು ದಕ್ಷವಾಗಿಸಲು ಸಾಧ್ಯ ? ಹೇಗೆ ವಕ್ಫ್ ಸೊತ್ತುಗಳನ್ನು ರಕ್ಷಿಸಲು ಸಾಧ್ಯ ? ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವುದೂ ಈ ಸರಕಾರದ ದುರುದ್ದೇಶದಿಂದಲೇ ಆಗಿದೆ. ಈ ದೇಶದ ಬೇರಾವುದೇ ಧರ್ಮದ ಧಾರ್ಮಿಕ ಮಂಡಳಿಗಳಲ್ಲಿ ಆ ಧರ್ಮದವರಲ್ಲದೆ ಬೇರೆ ಧರ್ಮದವರನ್ನು ಸೇರಿಸುವ ನಿಯಮ ಇಲ್ಲದಿರುವಾಗ ಮುಸ್ಲಿಮರ ವಕ್ಫ್ ಮಂಡಳಿಯಲ್ಲಿ ಮಾತ್ರ ಮುಸ್ಲಿಮೇತರರೂ ಇರಬೇಕು ಎಂಬುದು ತೀರಾ ಸಂವಿಧಾನ ವಿರೋಧಿ ಕ್ರಮವಾಗಿದೆ.

ನಮ್ಮ ಸರಕಾರದಲ್ಲಿ ಯಾವುದೇ ಧಾರ್ಮಿಕ ತಾರತಮ್ಯ ಇಲ್ಲ ಎಂದು ಅಂತರ್ ರಾಷ್ಟ್ರೀಯ ವೇದಿಕೆಗಳಲ್ಲಿ ಭಾಷಣ ಮಾಡುವ ಪ್ರಧಾನಿ ಮೋದಿಯವರು ವಕ್ಫ್ ಮಸೂದೆಯಲ್ಲಿ ಎದ್ದು ಕಾಣುವಂತಹ ತಾರತಮ್ಯದ ನೀತಿಗಳನ್ನೇ ಸೇರಿಸಿರುವುದು ವಿಪರ್ಯಾಸವಾಗಿದೆ. ಮೋದಿ ಸರಕಾರ ಮುಸ್ಲಿಮರ ವಿಚಾರದಲ್ಲಿ ಹೇಳುವುದು ಒಂದು, ಮಾಡುವುದು ಮಾತ್ರ ಅದಕ್ಕೆ ತದ್ವಿರುದ್ಧವಾದುದು ಎಂಬುದು ವಕ್ಫ್ ಮಸೂದೆಯಲ್ಲಿ ಇನ್ನೊಮ್ಮೆ ಸಾಬೀತಾಗಿದೆ. ಪ್ರಧಾನಿಯವರು ಭಾಷಣಗಳಲ್ಲಿ ಹೇಳುವಂತೆ ಅವರು ನಿಜವಾಗಿಯೂ ಮುಸ್ಲಿಂ ಸಮುದಾಯದ ಬಗ್ಗೆ ಪ್ರಾಮಾಣಿಕ ಕಾಳಜಿ ಉಳ್ಳವರು ಎಂದಾದರೆ ಈ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪುನರ್ ವಿಮರ್ಶೆ ನಡೆಸಬೇಕು ಹಾಗು ಸದರಿ ಕಾಯ್ದೆಗೆ ಸಹಿ ಮಾಡದೆ ಪುನರಾವಲೋಕನಕ್ಕಾಗಿ ಸರಕಾರಕ್ಕೆ ಹಿಂತಿರುಗಿಸಬೇಕೆಂದು ರಾಷ್ಟ್ರಪತಿಯವರಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮನವಿ ಮಾಡುತ್ತದೆ


Spread the love
Subscribe
Notify of

0 Comments
Inline Feedbacks
View all comments