ಸಾಕ್ಷರತಾ ಆಂದೋಲನ ಕಾರ್ಯಾಗಾರ
ಮ0ಗಳೂರು: ಲೋಕಶಿಕ್ಷಣ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು, ಜಿಲ್ಲಾ ಸಾಕ್ಷರತಾ ಸಮಿತಿ ದ ಕ, ಜನಶಿಕ್ಷಣ ಟ್ರಸ್ಟ್ ಕಂಕನಾಡಿ, ಗ್ರಾಮ ಪಂಚಾಯತ್ ಸಜಿಪಮೂಡ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಸಜಿಪ ಮೂಡ ಇಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನದ ಕುರಿತು ಪ್ರಾಥಮಿಕ ಸಮೀಕ್ಷಾದಾರರ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಉದ್ಘಾಟಿಸಿ, ಸಾಕ್ಷರತೆ ನೀಡುವುದು ಅತ್ಯಂತ ಪವಿತ್ರ ಕಾರ್ಯವಾಗಿದ್ದು, ಸಮಾಜದ ಸರ್ವರೂ ಗೌರವದಿಂದ ಬದುಕಲು ಸಾಕ್ಷರತೆ ಅತ್ಯಂತ ಅವಶ್ಯ. ಈ ಪವಿತ್ರ ಕಾರ್ಯದಲ್ಲಿ ಸಮಾಜದ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು, ಸರಕಾರವು ಏನೇ ಕಾರ್ಯಕ್ರಮ ಮಾಡಿದರೂ ಅದು ಅನಕ್ಷರಸ್ಥರಿದ್ದಾಗ ತನ್ನ ಉದ್ದೇಶ ಈಡೇರಿಸಿಕೊಳ್ಳಲು ವಿಫಲವಾಗುತ್ತದೆ. ನಾವೆಲ್ಲಾ ಸೇರಿ ಸಜಿಪ ಮೂಡ ಗ್ರಾಮವನ್ನು ಸಂಪೂರ್ಣ ಸಾಕ್ಷರಗ್ರಾಮವನ್ನಾಗಿ ಮಾಡಲು ಪಣತೊಡೋಣ ಎಂದು ಕರೆ ನೀಡಿದರು. ಮುಖ್ಯ ಅಥಿತಿಯಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರು, ನಮ್ಮ ಗ್ರಾಮದಲ್ಲಿ ಅನಕ್ಷರಸ್ಥರು ಇರುವುದು ನೋವಿನ ವಿಚಾರ. ಎಲ್ಲಾ ಕಡೆ ಅಭಿವೃದ್ಧಿಯತ್ತ ಸಾಗುತ್ತಿರುವಾಗ, ನಮ್ಮ ಕೆಲಬಾಂಧವರು ಅಕ್ಷರವಂಚಿತರಾಗಿರುವುದು ಚಿಂತೆಯ ವಿಚಾರ, ನಮ್ಮೆಲ್ಲಾ ಶಕ್ತಿ ಸಾಮಥ್ರ್ಯ ಬಳಸಿ ನಮ್ಮ ಗ್ರಾಮವನ್ನು ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿಸುವ ಕಡೆ ದೃಢ ಹೆಜ್ಜೆಯಿಡೋಣ. ನಿಮ್ಮೊಂದಿಗೆ ನಾವಿದ್ದೇವೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತನ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಈ ಆಂದೋಲನವನ್ನು ನಾವೆಲ್ಲಾ ಸೇರಿ ಯಶಗೊಳಿಸೋಣ ಎಂದು ಕರೆ ನೀಡಿದರು.
ಮಾಜಿ ಓಂಬುಡ್ಸ್ ಮನ್ ಹಾಗೂ ಜಿಲ್ಲೆಯ ಸ್ವಚ್ಛತಾ ರಾಯಭಾರಿಗಳಾದ ಶೀನ ಶೆಟ್ಟಿ ,ಹಾಗೂ ಜನಶಿಕ್ಷಣ ಟ್ರಸ್ಟ್ನ ಕೃಷ್ಣ ಮೂಲ್ಯ ಸೂಕ್ತ ಮಾರ್ಗದರ್ಶನ ನೀಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ ಕೆ ಇವರು ಸಮೀಕ್ಷೆಯ ಕುರಿತು ವಿವರ, ವಿವಿಧ ತಂಡಗಳನ್ನು ರಚಿಸಿ ಸಮೀಕ್ಷೆ ಮಾಡುವ ವಿಧಾನದ ಕುರಿತು ಮನವರಿಕೆ ಮಾಡಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸೇವಾನಿರತರು ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಶಾಲಾ ಶಿಕ್ಷಕರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಸಲಹೆ ಸೂಚನೆ ನೀಡಿದರು. ಅಂತಿಮವಾಗಿ ಪ್ರತೀ ಗ್ರಾಮ ಪಂಚಾಯತ್ ಸದಸ್ಯರ ಮುಂದಾಳುತನದಲ್ಲಿ 20 ತಂಡಗಳನ್ನು ರಚಿಸಿ, ಆಗಸ್ಟ್ 21 ರಂದು ಏಕ ದಿನ ಸಮೀಕ್ಷೆ ನಡೆಸುವುದೆಂದು ತೀರ್ಮಾನಿಸಲಾಯಿತು.