ಸಾಗರ್ ಕವಚ್ ಅಣುಕು ಕಾರ್ಯಾಚರಣೆ
ಮಂಗಳೂರು : ಸರ್ಕಾರದ ನಿರ್ದೇಶನದಂತೆ ಭಯೋತ್ಪಾದಕ ದಾಳಿಗಳನ್ನು ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಯಾವ ರೀತಿ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಮತ್ತು ಭದ್ರತಾ ದೃಷ್ಠಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಮತ್ತು ಸಿದ್ದತೆಗಳು ಯಾವ ರೀತಿ ಸಮರ್ಥವಾಗಿವೆ ಎಂಬುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ಸಾಗರ್ ಕವಚ್ ಅಣುಕು ಕಾರ್ಯಾಚರಣೆಯನ್ನು ನವೆಂಬರ್ ೬ ಮತ್ತು ೭ ರಂದು ದ.ಕ ಜಿಲ್ಲಾಡಳಿತ, ಇಂಡಿಯನ್ ಕೋಸ್ಟ್ ಗಾರ್ಡ್, ಕರಾವಳಿ ಭದ್ರತಾ ಪಡೆ ಮತ್ತು ಪೊಲೀಸ್ ಇಲಾಖೆಯವರ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಇದರ ಮುಖ್ಯ ಉದ್ದೇಶ ರಕ್ಷಣಾ ಸಾಮಾರ್ಥ್ಯವನ್ನು ಸನ್ನದ್ದಗೊಳಿಸುವುದು ಮತ್ತು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ನಡುವಿನ ಸಾಮಾರಸ್ಯವನ್ನು ವೃದ್ಧಿಸಲು ಹಾಗೂ ಪ್ರಸ್ತುತ ಇರುವ ಸಾಮಾರ್ಥ್ಯವನ್ನು ಉನ್ನತೀಕರಣಗೊಳಿಸುವ ಉದ್ದೇಶದಿಂದ ಸಾಗರ್ ಕವಚ್ ಪ್ರಯೋಗವನ್ನು ನಡೆಸಲಾಗುತ್ತಿದೆ. ಸಮುದ್ರ ತೀರದ ಪ್ರಯೋಗ ಚಟುವಟಿಕೆಗಳ ಹೊಣೆಗಾರಿಕೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ತೆಗೆದುಕೊಂಡಿದ್ದು ಇದನ್ನು ಹೊರತುಪಡಿಸಿ ಇತರೆ ಪ್ರದೇಶದಲ್ಲಿ ಸಾಗರ್ ಕವಚ್ ಪ್ರಯೋಗವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ವಹಿಸಲಾಗುತ್ತದೆ.
ಈ ಅಣಿಕು ಪ್ರದರ್ಶನವನ್ನು ಸಾರ್ವಜನಿಕ ಸ್ಥಳಗಳಾದ ಪ್ರಾರ್ಥನಾ ಮಂದಿರ, ಪ್ರತಿಷ್ಟಿತ ಶಾಲಾ ಕಾಲೇಜುಗಳಲ್ಲಿ, ರೈಲು ನಿಲ್ದಾಣ, ಬಸ್ ನಿಲ್ದಾಣ, ಬೀಚ್, ಬಂದರು, ಸಾಪಿಂಗ್ ಕಾಂಪ್ಲೆಕ್ಸ್ಗಳು, ಕಡಲ ಕಿನಾರೆಗಳಲ್ಲಿ, ರಸ್ತೆಗಳಲ್ಲಿ ಇತರೆ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಈ ಪ್ರಯೋಗವು ಅರಿವು ಮೂಡಿಸುವ ಕಾರ್ಯಾವಾಗಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿವಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಬಹುದು. ಸಾರ್ವಜನಿಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈ ಕಾರ್ಯಾಚರಣೆಯು ಅಣುಕು ಕಾರ್ಯಾಚರಣೆಯಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.