ಸಾಧನಾ ಸಮಾವೇಶದ ಯಶಸ್ಸಿನಿಂದ ವಿಚಲಿತರಾದ ಬಿಜೆಪಿಯಿಂದ ವೃಥಾರೋಪ; ಉಡುಪಿ ಜಿಲ್ಲಾ ಕಾಂಗ್ರೆಸ್

Spread the love

ಸಾಧನಾ ಸಮಾವೇಶದ ಯಶಸ್ಸಿನಿಂದ ವಿಚಲಿತರಾದ ಬಿಜೆಪಿಯಿಂದ ವೃಥಾರೋಪ; ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ರಾಜ್ಯದ ಮುಖ್ಯಮಂತ್ರಿ   ಸಿದ್ಧರಾಮಯ್ಯನವರು ಕಳೆದ 1 ತಿಂಗಳಿನಿಂದ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕುವರೆ ವಷಗಳಲ್ಲಿ ತನ್ನ ಸರಕಾರ ಮಾಡಿದ ಸಾಧನೆಗಳ ಪರಾಮರ್ಶೆಗೆ ಅಲ್ಲದೆ ಜನರ ಸಮಸ್ಯೆಗಳನ್ನು ಆಲಿಸಲು ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಅದರಂತೆಯೇ ಬ್ರಹ್ಮಾವರದಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಕಡು ಬಿಸಿಲಿನಲ್ಲಿಯೂ ಜನಸಾಗರವೇ ಹರಿದು ಬಂದುದ್ದನ್ನು ಕಂಡು ಬಿಜೆಪಿ ದಿಗ್ಬ್ರಮೆಗೊಂಡಿದೆ.

ಸಮಾವೇಶಕ್ಕೆ ಜನರನ್ನು ಕಲೆ ಹಾಕಲು ವಾಮ ಮಾರ್ಗವನ್ನು ಅನುಸರಿಸದ್ದಾರೆ ಎಂಬ ಮಾಜಿ ಬಿಜೆಪಿ ಶಾಸಕರ ಆರೋಪ ಸತ್ಯಕ್ಕೆ ದೂರವಾದದ್ದು. ಫಲಾನುಭವಿಗಳು ಹಾಗೂ ಜನತೆ ಸ್ವಇಚ್ಚೆಯಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿರುವುದು ಬಿಜೆಪಿಗೆ ಸಹಿಸಲು ಅಸಾಧ್ಯವಾಗಿದೆ. ಇದರಿಂದ ವಿಚಲಿತರಾಗಿ ವೃಥಾರೋಪ ಮಾಡುತ್ತಿದ್ದಾರೆ. ಈ ಸಮಾವೇಶದ ಯಶಸ್ಸಿನಿಂದ ಜನತೆ ರಾಜ್ಯ ಸರಕಾರದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಬೆಂಬಲಿಸಿರುವುದು ದೃಡಪಟ್ಟಿದೆ. ಬ್ರಹ್ಮಾವರದಲ್ಲಿ ನಡೆದ ಸಮಾವೇಶಕ್ಕೆ ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಾಲಯದಿಂದ ಭೋಜನ  ತರಿಸಲಾಗಿದೆ ಎಂದು ಸುಳ್ಳು ಆರೋಪ ಹೊರಿಸುವ ಮಾಜಿ ಶಾಸಕರು ತಮ್ಮ ಪಕ್ಷದ ರೈತ ಚೈತನ್ಯ ಸಮಾವೇಶ ಉಡುಪಿಯಲ್ಲಿ ನಡೆದಾಗ ಉಡುಪಿಯ ಪ್ರಸಿದ್ದ ಮುಜುರಾಯಿ ಆಡಳಿತವಿರುವ ದೇವಾಲಯದಿಂದ ಭೋಜನ ತರಿಸಿ ಸವಿದಿರುವುದನ್ನು ನೆನಪಿಸಿಕೊಳ್ಳಬೇಕಾಗಿದೆ. ಅಲ್ಲದೆ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಈಗಾಗಲೇ ಈ ವಿಷಯದ ಬಗ್ಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಸರಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವುದ ಜಿಲ್ಲಾಡಳಿತದ ಕರ್ತವ್ಯ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರು ಸರಕಾರದ ಈ ಕಾರ್ಯಕ್ರಮಗಳ ಯಶಸ್ವಿಗೆ ಮುತುವರ್ಜಿ ವಹಿಸಿದರೆ ಅವರನ್ನು ಉಸ್ತುವಾರಿ ಸಚಿವರ ಕೈಗೊಂಬೆಗಳೆಂದು ಮಾಜಿ ಶಾಸಕರು ದೂಷಿಸಿರುವುದು ಅವರಲ್ಲಿಯ ನೆನಪುಗಳ ಕೊರತೆಯ ಕಾರಣ. ರಘುಪತಿ ಭಟ್‍ರವರು ಶಾಸಕರಾಗಿದ್ದ ಅವಧಿಯಲ್ಲಿ ಜಿಲ್ಲಾಡಳಿತ ಅವರ ಆದೇಶಗಳನ್ನು ಪಾಲಿಸಲಿಲ್ಲವೇ? ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಲ್ಲವೇ? ಆಗ ಜಿಲ್ಲಾಡಳಿತ ಅವರ ಕೈಗೊಂಬೆಯಾಗಿ ಕಾಣದ್ದು ಈಗ ಕಾಣಲು ಹೇಗೆ ಸಾಧ್ಯ? ಜಿಲ್ಲಾಡಳಿತದ ಸೂಚನೆ ಮೇರೆಗೆ ಸರಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮವನ್ನು ಸುಸೂತ್ರವಾಗಿ ಜರಗಲು ಅವಶ್ಯಕ ಕ್ರಮ ಕೈಗೊಂಡಿದ್ದಾರೆ.

ಸಚಿವ ಪ್ರಮೋದ್ ಮಧ್ವರಾಜ್‍ರವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ 1900 ಕೋಟಿಗೂ ಮಿಕ್ಕಿ ಅನುದಾನವನ್ನು ತಂದು ಉಡುಪಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದಾರೆ. ಈ ಅಭಿವೃದ್ಧಿಯಿಂದ ಕಂಗಾಲಾದ ಬಿಜೆಪಿಯ ಮಾಜಿ ಶಾಸಕರು ಶಿಸ್ತುಬದ್ಧವಾದ ಸಾಧನಾ ಸಮಾವೇಶದಲ್ಲಿ ಸೇರಿದ ಜನಸಾಗರವನ್ನು ಕಂಡು ದಿಗ್ಬ್ರಮೆಗೊಂಡು ಮನಬಂದಂತೆ ಮಾತನಾಡುತ್ತಿದ್ದಾರೆ. ಮಾಜಿ ಶಾಸಕರಿಗೆ ತಮ್ಮ ಅವಧಿಯಲ್ಲಿ ಪ್ರತೀ ಇಲಾಖೆಗಳಿಂದ ವಸೂಲಿ ಮಾಡಿ ಅನುಭವವಿರಬಹುದು ಇದನ್ನು ಇತರರ ಮೇಲೆ ಹೊರೆಸುವುದು ಅಕ್ಷಮ್ಯ ಅಪರಾಧ ಎಂದು ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಹೇಳಿಕೆ ನೀಡಿದ್ದಾರೆ.


Spread the love