ಸಾಮಾಜಿಕ ಜಾಲತಾಣಗಳು ಸಕಾರಾತ್ಮಕ ಬಳಕೆಗೆ ಸೀಮಿತವಾಗಲಿ: ಪ್ರೋ. ವನಿತಾ ಭಂಡಾರಿ
ಮೂಡುಬಿದಿರೆ: ಪುರಾಣ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಸಾಮಾಜಿಕ ವ್ಯವಸ್ಥೆ ಬೆಳೆದಂತೆ ಸಮಾಜದಲ್ಲಿ ಲಿಂಗ ತಾರತಮ್ಯವು ಹೆಚ್ಚುತ್ತಿದೆ. ಆದ್ದರಿಂದ ಮಹಿಳೆಯರು ತಮ್ಮ ಯೋಚನೆಗಳನ್ನು ಆಳವಾಗಿಸಿಕೊಳ್ಳಬೇಕು. ಹಲವಾರು ಕ್ಷೇತ್ರಗಳಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಆಳ್ವಾಸ್ ಮೆಡಿಕಲ್ ಲ್ಯಾಬ್ ಟೆಕ್ನಿಶಿಯನ್ ಕಾಲೇಜಿನ ಪ್ರಾಧ್ಯಾಪಕಿ ಪ್ರೋ. ವನಿತಾ ಭಂಡಾರಿ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಶುಕ್ರವಾರ ನಡೆದ ಪದವಿ ಪೂರ್ವ ವಿಭಾಗದ ಮಹಿಳಾ ಕ್ಷೇಮಪಾಲನಾ ಸಂಘವನ್ನು ಉದ್ಘಾಟಿಸಿ ಅವರು ಸಾಮಾಜಿಕ ಜಾಲತಾಣಗಳ ಪರಿಣಾಮಗಳು ಮತ್ತು ಸುರಕ್ಷತಾ ವಿಧಾನಗಳ ಕುರಿತು ಮಾತನಾಡಿದರು. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಾಮಾಜಿಕ ಜಾಲತಾಣಗಳೂ ಪರೋಕ್ಷವಾಗಿ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಸಮಯ ಹರಣದೊಂದಿಗೆ ಆತಂಕ ಮತ್ತು ಮಾನಸಿಕ ಖಿನ್ನತೆಗೆ ತುತ್ತಾಗುವ ಸಂಭವವಿರುತ್ತದೆ. ಇದರೊಂದಿಗೆ ಸೈಬರ್ ಕ್ರೈಮ್‍ನಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಮಹಿಳೆಯರು ತಮ್ಮ ಖಾಸಗಿತನವನ್ನು ಅರಿವಿನಲ್ಲಿಟ್ಟುಕೊಂಡು ತಂತ್ರಜ್ಞಾನಗಳನ್ನು ಇತಿಮಿತಿಯಲ್ಲಿ ಬಳಸಬೇಕು. ಸಂಹವನಗಳು ಸಕಾರಾತ್ಮಕ ಬಳಕೆಗೆ ಸೀಮಿತವಾಗಿರಲಿ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ ಮಾತನಾಡಿ, ಪಾಶ್ಚಾತ್ಯ ಸಂಸ್ಕøತಿಯ ಪರಿಣಾಮದಿಂದ ಇಂದಿನ ಸಮಾಜದಲ್ಲಿ ಜನತೆ ಸಂಸ್ಕøತಿಯ ಚೌಕಟ್ಟನ್ನು ಮೀರಿ ನಡೆಯುತ್ತಿದ್ದಾರೆ. ಆರ್ಥಿಕವಾಗಿ ಸ್ವತಂತ್ರ್ಯರಾದರೂ ಸಂಸ್ಕøತಿಯನ್ನು ಮರೆಯಬಾರದು. ಮಹಿಳೆಯರ ಮನೋಸ್ಥಿತಿ ಪ್ರಬುದ್ಧವಾಗಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಹೆಚ್ಚಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಮಹಿಳಾ ಕ್ಷೇಮಪಾಲನಾ ಸಂಘ ಆರಂಭಿಸಿದ ಉದ್ದೇಶ ಹಾಗೂ ಅದರ ಸದುಪಯೋಗದ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಆಭಿನಯಶ್ರೀ ಮಾತನಾಡಿ ಎಲ್ಲಾ ಮಹಿಳೆಯರಿಗೆ ಉನ್ನತ ಸ್ಥಾನಕ್ಕೇರಲು ಸಾದ್ಯವಾಗದಿದ್ದರೂ ಚುನಾವಣೆಯಲ್ಲಿ ಉತ್ತಮ ಜನನಾಯಕರನ್ನು ಆರಿಸಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ಕಲಾ ವಿಭಾಗದ ಡೀನ್ ಪ್ರೋ. ವೇಣುಗೋಪಾಲ್ ಶೆಟ್ಟಿ, ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತೀತಾ ಸ್ವಾಗತಿಸಿದರು, ರಂಜಿತಾ ವಂದಿಸಿದರು. ವಿದ್ಯಾರ್ಥಿನಿ ಶ್ರೇಯಾ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.