ಸಾಮಾಜಿಕ ಜಾಲತಾಣದಲ್ಲಿ ಪ್ರಮೋದ್ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಸೆನ್ ಠಾಣೆಗೆ ದೂರು
ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ರೂ. 193 ಕೋಟಿ ಬ್ಯಾಂಕಿಂಗ್ ವಂಚನೆ ಎಂದು ಕಪಲೋಕಲ್ಪಿತ ಸುದ್ದಿಯು ಮಾರ್ಚ್ 13 ರಿಂದ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಕಿಡಿಗೇಡಿಗಳು ಸಚಿವ ಪ್ರಮೋದ್ ಮಧ್ವರಾಜ್ ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಈ ರೀತಿ ಸುದ್ದಿ ಹಬ್ಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವವರ ವಿರುದ್ದ ವಿಚಾರಣೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಬಗ್ಗೆ ಅಪಪ್ರಚಾರ ನಡೆಸುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳೂವಂತೆ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ, ಯುವ ಕಾಂಗ್ರೆಸ್ ನಾಯಕರಾದ ಸಾಯಿ ರಾಜ್, ನೀರಜ್ ಪಾಟೀಲ್, ಮಹಮ್ಮದ್ ರಿಹಾನ್ ಹಾಗೂ ಇತರರು ಉಪಸ್ಥಿತರಿದ್ದರು.