Home Mangalorean News Kannada News ಸಾರ್ವಜನಿಕರ ಜಾಗವನ್ನು ಅತಿಕ್ರಮಿಸುತ್ತಿರುವ ವಾಣಿಜ್ಯ ಸಂಕೀರ್ಣಗಳು ಮ.ನ.ಪಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ನಿದರ್ಶನ – ಮಾಜಿ ಶಾಸಕ...

ಸಾರ್ವಜನಿಕರ ಜಾಗವನ್ನು ಅತಿಕ್ರಮಿಸುತ್ತಿರುವ ವಾಣಿಜ್ಯ ಸಂಕೀರ್ಣಗಳು ಮ.ನ.ಪಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ನಿದರ್ಶನ – ಮಾಜಿ ಶಾಸಕ  ವಿಜಯಕುಮಾರ್ ಶೆಟ್ಟಿ

Spread the love

ಸಾರ್ವಜನಿಕರ ಜಾಗವನ್ನು ಅತಿಕ್ರಮಿಸುತ್ತಿರುವ ವಾಣಿಜ್ಯ ಸಂಕೀರ್ಣಗಳು ಮ.ನ.ಪಾ ಅಧಿಕಾರಿಗಳ ಭ್ರಷ್ಟಾಚಾರಕ್ಕೆ  ನಿದರ್ಶನ – ಮಾಜಿ ಶಾಸಕ  ವಿಜಯಕುಮಾರ್ ಶೆಟ್ಟಿ

ಮಂಗಳೂರು : ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಂಡ ನಗರವಾಗಿದೆ. ಆದರೆ ನಗರಕ್ಕೆ ಒಂದು ಸುವ್ಯವಸ್ಥಿತ ರೂಪ ಕೊಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ. ವಾಹನಗಳ ದಟ್ಟಣೆಯಿಂದ ನಗರದ ಪ್ರತಿಯೊಂದು ಪ್ರಮುಖ ರಸ್ತೆಗಳಲ್ಲಿ ನಿಮಿಷ ನಿಮಿಷಕ್ಕೂ ನಡೆಯುವ ವಾಹನಗಳ ಬ್ಲಾಕ್‍ಗಳಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮ.ನ.ಪಾ ಕ್ಕೆ ನಗರ ವ್ಯಾಪ್ತಿಯಲ್ಲಿ ಇದುವರೆಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

ಮ.ನ.ಪಾ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಸೆಟ್‍ಬ್ಯಾಕ್‍ಗಾಗಿ ಇಂತಿಷ್ಟು ಜಾಗವನ್ನು ಬಿಡಬೇಕು ಮತ್ತು ಅದಕ್ಕೆ ಅಗತ್ಯ ಬೀಳುವ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ ಇಲ್ಲಿರುವ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‍ಗೆ ಮೀಸಲಿಡಬೇಕಾದ ಜಾಗದಲ್ಲಿ ಅಂಗಡಿ ಕೋಣೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ. ಅಲ್ಲದೆ ವಾಣಿಜ್ಯ ಸಂಕೀರ್ಣಗಳ ಎದುರುಗಡೆ ಇರುವ ಮ.ನ.ಪಾ ಕ್ಕೆ ಸಂಬಂಧಪಟ್ಟ ಸಾರ್ವಜನಿಕರ ಜಾಗವನ್ನು ಕಬಳಿಸಿ ಅಲ್ಲಿ ತಾವೇ “ನೋ-ಪಾರ್ಕಿಂಗ್” ಬೋರ್ಡ್‍ಗಳನ್ನು ಅಳವಡಿಸಿ, ವಾಚ್‍ಮೆನ್‍ಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ಮೀಸಲಾಗಿರುವ ಪಾರ್ಕಿಂಗ್ ಜಾಗಗಳಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ಕೊಡುವುದಿಲ್ಲ. ಇದಕ್ಕಾಗಿಯೇ ಇಲ್ಲಿರುವ ಕೆಲವು ಪ್ರತಿಷ್ಠಿತ ಶಾಪಿಂಗ್ ಮಾಲ್‍ಗಳಲ್ಲಿ ವಾಹನ ನಿಲುಗಡೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಇಲ್ಲಿನ ಸಿಟಿಸೆಂಟರ್ ಮಾಲ್‍ನಲ್ಲಿ ಅಲ್ಲಿನ ಗ್ರಾಹಕರ ವಾಹನಗಳು ಪಾರ್ಕಿಂಗ್ ಮಾಡಿದರೆ ಗಂಟೆಗೆ ಇಂತಿಷ್ಟು ಎಂದು ಅಕ್ರಮವಾಗಿ ಪಾರ್ಕಿಂಗ್ ಸುಂಕ ವಸೂಲಿ ಮಾಡಲಾಗುತ್ತಿದೆ.

ನಿಯಮಗಳ ಪ್ರಕಾರ ನೋ-ಪಾರ್ಕಿಂಗ್ ಬೋರ್ಡ್‍ಗಳನ್ನು ಮಹಾನಗರ ಪಾಲಿಕೆಯವರು ಹಾಕಬೇಕು. ಖಾಸಗಿ ಸಂಸ್ಥೆಯವರು ಹಾಕುವಂತಿಲ್ಲ. ಆದರೆ ಮಂಗಳೂರು ನಗರದಾದ್ಯಂತ ಅಂಗಡಿ ಮಾಲಕರೇ ತಮ್ಮ ತಮ್ಮ ಅಂಗಡಿಗಳ ಮುಂದೆ ನೋ-ಪಾರ್ಕಿಂಗ್ ಬೋರ್ಡ್‍ಗಳನ್ನು ಅಳವಡಿಸಿ ಮ.ನ.ಪಾ ಜಾಗವನ್ನು ಅತಿಕ್ರಮಿಸಿದ್ದಾರೆ.ಮಂಗಳೂರು ಇದೀಗ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ.

ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರ್ಪಡೆಗೊಂಡ ನಗರ. ಆದರೆ ನಗರಕ್ಕೆ ಒಂದು ಸುವ್ಯವಸ್ಥಿತ ರೂಪ ಕೊಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸೋಲುತ್ತಾ ಬಂದಿದೆ. ಇಂದಿಗೂ ಸೋಲುತ್ತಲೇ ಇದೆ. ಕಾರಣ ರಿಯಲ್ ಎಸ್ಟೇಟ್ ಉದ್ಯಮಕ್ಕೆ, ಕಟ್ಟಡಗಳ ಭೂ ದಾಹಕ್ಕೆ ಪಾಲಿಕೆ ರಸ್ತೆಯ ಅಕ್ಕ ಪಕ್ಕದ ಫುಟ್‍ಪಾತ್ ದಾರಿಗಳೇ ಕಬಳಿಕೆಯಾಗುತ್ತಿವೆ. ನೆಪ ಮಾತ್ರಕ್ಕೆ ಸೆಟ್‍ಬ್ಯಾಕ್, ಕಟ್ಟಡದ ತಳಭಾಗ, ಮುಂಭಾಗದಲ್ಲಿ ಪಾರ್ಕಿಂಗ್ ತೋರಿಸುವ ಕಟ್ಟಡದ ಮಾಲಕರು ಬಳಿಕ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿ ರಸ್ತೆಯ ಅಕ್ಕ ಪಕ್ಕದ ಜಾಗಕ್ಕೆ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ ದರ್ಪ ಮೆರೆಯುತ್ತಿದ್ದಾರೆ. ಮೊಬೈಲ್ ಮೂಲಕ ಮಾತನಾಡಲು ವಾಹನ ನಿಲ್ಲಿಸಿದರೆ ತಮ್ಮದೇ ಜಾಗೀರು ಭೂಮಿ ಎಂಬಂತೆ ವರ್ತಿಸಿ ಕಾವಲುಗಾರನ ಮೂಲಕ ಬೆದರಿಕೆ ಹಾಕಿ ಓಡಿಸುತ್ತಾರೆ. ಇದು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಸಿಟಿಯಾಗುವ ಮಂಗಳೂರಿನ ಪರಿಸ್ಥಿತಿ. ಶೇ.80ರಷ್ಟು ಕಟ್ಟಡ ಪರಿಶೀಲಿಸಿದರೆ ಪಾರ್ಕಿಂಗ್ ಇಲ್ಲದ ಅಂಶ ಎದ್ದು ಕಾಣುತ್ತದೆ. ಇನ್ನು ಪಾರ್ಕಿಂಗ್ ಮಾಡಲು ಸರಕಾರಿ ಜಾಗ ಒತ್ತುವರಿ ಆಗಿದೆ ಸರಿ ಮಾಡಿಕೊಡಿ ಎಂದು ಪೊಲೀಸ್ ಇಲಾಖೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯುವವರೆಗೆ ಪಾರ್ಕಿಂಗ್ ಲಾಬಿ ಬಂದು ನಿಂತಿದೆ. ಒಂದೊಮ್ಮೆ ಮೇಯರ್ ಕವಿತಾ ಸನಿಲ್ ಅವರು ಪಾಲಿಕೆ ಜಾಗದಲ್ಲಿ ಖಾಸಗೀ ಕಟ್ಟಡ ಮಾಲಕರು ಹಾಕಿದ ಬೋರ್ಡ್, ಚೈನ್‍ಗಳನ್ನು ತೆಗೆಸಿ ಶ್ಲಾಘನೆಗೆ ಪಾತ್ರವಾಗಿದ್ದರು. ಇದೀಗ ಮತ್ತೆ ಭೂಮಿಯ ಅತಿಕ್ರಮಣ ಕಂಡು ಬರುತ್ತಿದೆ. ಮುಂಬರುವ ಸಮಸ್ಯೆಯನ್ನು ಪರಿಗಣಿಸಿ ಈಗಲೇ ಕಾರ್ಯಪ್ರವೃತ್ತವಾಗದ್ದಿದ್ದರೆ ಪಾರ್ಕಿಂಗ್ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾಗಿ ನಗರವನ್ನು ಕಾಡಲಿದೆ.

ಎಂ ಜಿ ರೋಡ್, ವಿಶ್ವ ಭವನ ರಸ್ತೆ, ಶಿವಭಾಗ್ ರಸ್ತೆ, ಅತ್ತಾವರ ಹೈಲ್ಯಾಂಡ್ ಹೀಗೆ ಎಲ್ಲೇ ನೋಡಿದರೂ ರಸ್ತೆ ಇಕ್ಕೆಲಗಳೂ ಇದೀಗ ಖಾಸಗೀ ಕಟ್ಟಡದಾರರ ಸುಪರ್ದಿಯಲ್ಲಿರುವುದು ಸ್ಪಷ್ಟ.ಲಕ್ಷ ಲಕ್ಷ ಲಂಚ ಪಡೆದು ವಾಣಿಜ್ಯ ಸಂಕೀರ್ಣಗಳಿಗೆ ಬಹಳ ಸುಲಭವಾಗಿ ಪರವಾನಿಗೆ ನೀಡುತ್ತಿರುವ ಇಲ್ಲಿನ ಅಧಿಕಾರಿಗಳು ಬಂಡವಾಳ ಶಾಹಿಗಳ ಕೈಗೊಂಬೆಗಳಾಗಿದ್ದಾರೆ. ಆದುದರಿಂದ ನೋ-ಪಾರ್ಕಿಂಗ್ ಬೋರ್ಡುಗಳು ಕಂಡರೂ ಮೂಕ ಪ್ರೇಕ್ಷಕರಾಗಿದ್ದಾರೆ.

ನಗರದ ಪ್ರಮುಖ ವಾಣಿಜ್ಯ ಕಟ್ಟಡಗಳು, ವಸತಿ ಸಮುಚ್ಛಯಗಳು ಸೇರಿದಂತೆ 55 ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾಗಿದ್ದ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪತ್ತೆಮಾಡಿರುವ ನಗರ ಸಂಚಾರ ವಿಭಾಗದ ಪೊಲೀಸರು, ಈ ಕಟ್ಟಡಗಳ ಪಟ್ಟಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಕಳುಹಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಅತಿಯಾದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಕುರಿತು ಪೊಲೀಸರು ಇತ್ತೀಚೆಗೆ ತಪಾಸಣೆ ನಡೆಸಿದ್ದರು. ಬಹುಮಹಡಿ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದು, ಅಲ್ಲಿನ ವಾಹನಗಳನ್ನು ರಸ್ತೆಗಳ ಮೇಲೆ ನಿಲುಗಡೆ ಮಾಡುತ್ತಿರುವುದು ಸಂಚಾರ ದಟ್ಟಣೆ ಹೆಚ್ಚಲು ಪ್ರಮುಖ ಕಾರಣ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಈ ವಿಚಾರವನ್ನು ಪಾಲಿಕೆಯ ಗಮನಕ್ಕೆ ತಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಕರ್ನಾಟಕ ನಗರಾಡಳಿತ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸುವಂತೆ ಕೋರಿದ್ದರೂ ಪಾಲಿಕೆ ಆಡಳಿತ ಶಾಹಿ ಕಣ್ಮುಚ್ಚಿ ಕುಳಿತಿದೆ ಎಂದು ಮಾಜಿ ಶಾಸಕ  ವಿಜಯಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Spread the love

Exit mobile version