ಸಾರ್ವಜನಿಕ ಆಸ್ತಿ ನಷ್ಟ ಬಂದ್ ಕರೆ ಕೊಟ್ಟವರಿಂದಲೇ ವಸೂಲಿಗೆ ಕ್ರಮ: ರಮಾನಾಥ ರೈ
ಮಂಗಳೂರು: ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಭೇಟಿ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಬಂದ್ ವೇಳೆ ಆಗಿರುವ ಸಾರ್ವಜನಿಕ ಆಸ್ತಿ ಹಾನಿಯ ನಷ್ಟವನ್ನು ಬಂದ್ಗೆ ಕರೆ ನೀಡಿದ ಸಂಘಟನೆಗಳಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಣರಾಯಿ ವಿಜಯನ್ ರಾಜ್ಯಕ್ಕೆ ಬಂದಾಗ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಜವಾಬ್ದಾರಿ. ಅದರಂತೆ ನಾವು ಭದ್ರತೆ ಒದಗಿಸಿದ್ದೇವೆ. ಬಂದ್ಗೆ ಕರೆ ನೀಡುವ ಸಂದರ್ಭದಲ್ಲಿ ಈಗಾಗಲೇ ಕೆಲವರಿಂದ ಬಾಂಡ್ ಸಹಿತ ಮುಚ್ಚಳಿಕೆ ಪತ್ರ ಪಡೆದಿದ್ದು, ಆಸ್ತಿ ಮುಟ್ಟುಗೋಲಿಗೆ ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.
ಜತೆಗೆ ಬಂದ್ ಸಂದರ್ಭದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧವೂ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದರು.
ಸಂಪುಟ ಪುನರ್ ರಚನೆ ಕುರಿತ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಂಪುಟ ಪುನರ್ ರಚನೆ ಸೇರಿದಂತೆ ಯಾವುದೇ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಆದರೆ ಈವರೆಗೆ ಸಂಪುಟ ಪುನರ್ ರಚನೆ ಕುರಿತ ಯಾವುದೇ ಮಾಹಿತಿ ನನಗೆ ಲಭ್ಯವಾಗಿಲ್ಲ ಎಂದಿದ್ದಾರೆ.
ಕ್ರಪೆ : ಪ್ರಜಾವಾಣಿ