ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ

Spread the love

ಸಾಲಮನ್ನಾ: ರೈತರಿಗೆ ಸಮರ್ಪಕ ಮಾಹಿತಿ ನೀಡಲು ಐವಾನ್ ಡಿಸೋಜಾ ಸೂಚನೆ

ಉಡುಪಿ: ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ 4720 ಖಾತೆಗಳು ಹಾಗೂ ಸಹಕಾರ ಸಂಘಗಳಲ್ಲಿ 24232 ರೈತರ ಖಾತೆಗಳು ಸಾಲಮನ್ನಾಗೊಳಿಸಲು ಅರ್ಹತೆ ಪಡೆದಿವೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ರೂ. 8.26 ಕೋಟಿ ಹಾಗೂ ಸಹಕಾರಿ ಬ್ಯಾಂಕ್ಗಳಿಗೆ 69.46 ಕೋಟಿ ರೂ. ಈಗಾಗಲೇ ರಾಜ್ಯ ಸರಕಾರದಿಂದ ಬಿಡುಗಡೆಯಾಗಿ, ರೈತರ ಖಾತೆಗಳಿಗೆ ಜಮೆಯಾಗಿ ಸಾಲಮನ್ನಾಗೊಳಿಸಲಾಗಿದೆ. ಆದರೆ, ಬಹುತೇಕ ಬ್ಯಾಂಕುಗಳು ಈ ಮಾಹಿತಿಯನ್ನು ರೈತರಿಗೆ ನೀಡದಿರುವುದರಿಂದ ತಮ್ಮ ಸಾಲಮನ್ನಾಗೊಂಡಿರುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಸಾಲಮನ್ನಾಗೆ ಹಣ ಬಿಡುಗಡೆಯಾಗಿರುವ ಪ್ರತಿಯೊಬ್ಬ ರೈತನಿಗೂ ಪತ್ರ ಮೂಲಕ ಮಾಹಿತಿ ನೀಡಲು ಅವರು ಸೂಚಿಸಿದರು.

ರಾಜ್ಯ ಸರಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಪ್ರತೀ ತಿಂಗಳು ಸಕಾಲದಲ್ಲಿ ಪಿಂಚಣಿ ಲಭ್ಯವಾಗುವಂತೆ ಮುತುವರ್ಜಿ ವಹಿಸಬೇಕು. ಪಿಂಚಣಿ ಅದಾಲತ್ ಮೂಲಕ ಈಗಾಗಲೇ ಪಿಂಚಣಿ ವಿಳಂಭದಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಸಮನ್ವಯ ಕೊರತೆಯಾಗದಂತೆ ಗಮನಹರಿಸಲು ಐವನ್ ಡಿಸೋಜಾ ತಿಳಿಸಿದರು.

ಭೂ ಮಂಜೂರಾತಿಗೆ ಸಂಬಂಧಿಸಿದಂತೆ 94 ಸಿ ಅಡಿ 33728 ಅರ್ಜಿಗಳು ಹಾಗೂ 94 ಸಿಸಿ ಅಡಿಯಲ್ಲಿ 8921 ಅರ್ಜಿಗಳು ಉಡುಪಿ ಜಿಲ್ಲೆಯಲ್ಲಿ ಸ್ವೀಕೃತವಾಗಿದೆ. ಈ ಪೈಕಿ ಶೇಕಡಾ 86 ರಷ್ಟು ಅರ್ಜಿಗಳು ವಿಲೇವಾರಿಯಾಗಿರುವುದು ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೂದಾಖಲೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಆಯಾ ಗ್ರಾಮ ಮಟ್ಟದಲ್ಲೇ ವಿಶೇಷ ಅದಾಲತ್ ನಡೆಸಿ ಪರಿಹಾರ ಒದಗಿಸಬೇಕು. ಭೂಪರಿವರ್ತನೆಗೆ ಪ್ರಸಕ್ತ ಆನ್ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆ ನಡೆಸಿ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಐವನ್ ಡಿಸೋಜಾ ತಿಳಿಸಿದರು.

ವಕ್ಫ್ ಆಸ್ತಿ ಒತ್ತುವರಿ ತೆರವು- ತ್ವರಿತಗೊಳಿಸಲು ಸೂಚನೆ: ಉಡುಪಿ ಜಿಲ್ಲೆಯಲ್ಲಿ ವಕ್ಫ್ಗೆ ಸಂಬಂಧಪಟ್ಟ ಜಮೀನು, ಆಸ್ತಿ ಒತ್ತುವರಿಯಾಗಿರುವ ಬಗ್ಗೆ ಸಂಸದೀಯ ಕಾರ್ಯದರ್ಶಿಗಳು ಸಭೆಯಲ್ಲಿ ಮಾಹಿತಿ ಕೋರಿದರು. ಇದಕ್ಕೆ ಉತ್ತರಿಸಿದ ವಕ್ಫ್ ಅಧಿಕಾರಿ, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ವಕ್ಫ್ಗೆ ಸಂಬಂಧಪಟ್ಟ ಆಸ್ತಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಹೆಚ್ಚಿನ ಒತ್ತುವರಿ ಪ್ರಕರಣಗಳಲ್ಲಿ ಖಾಸಗೀ ವ್ಯಕ್ತಿಗಳ ಹೆಸರಿಗೆ ವಕ್ಫ್ ಭೂಮಿ ಪರಭಾರೆಯಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳೂ ಲಭ್ಯವಾಗುತ್ತಿಲ್ಲ. ವಕ್ಫ್ ಭೂಮಿ ಒತ್ತುವರಿ ತೆರವುಗೊಳಿಸಲು ರಾಜ್ಯ ಸರಕಾರವು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ರಚಿಸಿದೆ ಎಂದು ಹೇಳಿದರು. ಒತ್ತುವರಿಯಾಗಿರುವ ಎಲ್ಲಾ ಆಸ್ತಿಗಳ ಸಮಗ್ರ ವಿವರ ಪಡೆದು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಒತ್ತುವರಿ ತೆರವುಗೊಳಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಲು ಐವನ್ ಡಿಸೋಜಾ ಸೂಚಿಸಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಗೆ ಪ್ರಸಕ್ತ ಒಂದು ಉಪವಿಭಾಗ ಮಾತ್ರ ಇದ್ದು, ಆಡಳಿತಾತ್ಮಕ ದೃಷ್ಟಿಯಿಂದ ಉಡುಪಿಯಲ್ಲಿ ಇನ್ನೊಂದು ಉಪವಿಭಾಗ ಅಗತ್ಯವಿದೆ. ಅಲ್ಲದೇ, ಗ್ರಾಮಕರಣಿಕರಿಗೆ ಆಯಾ ಗ್ರಾಮದಲ್ಲಿಯೇ ಕಚೇರಿ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರಕಾರದಿಂದ ಮಂಜೂರುಗೊಳಿಸಲು ಮನವಿ ಮಾಡಿದರು. ಅಲ್ಲದೇ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಜೂರುಗೊಂಡ ಸರಕಾರದ ಭೂಮಿಗಳಲ್ಲಿ ಕೆಲವೆಡೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಈಗಾಗಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ ಅವರು ಉಡುಪಿಗೆ ಪ್ರತ್ಯೇಕ ಉಪ ವಿಭಾಗ ರಚಿಸಲು ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್, ಜಿಲ್ಲೆಯ ತಾಲೂಕುಗಳ ತಹಶೀಲ್ದಾರ್ಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love