ಸಾಲಿಗ್ರಾಮ ಪ ಪಂಚಾಯತಿನಲ್ಲಿ ಕಾಂಗ್ರೆಸಿಗೆ ಮುಖಭಂಗ; ಜೆಪಿ ಹೆಗ್ಡೆ ಬಣದ ವಸುಮತಿ ನಾಯರಿ ಅಧ್ಯಕ್ಷರಾಗಿ ಆಯ್ಕೆ

Spread the love

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎರಡನೇಯ ಅವಧಿಗಾಗಿ ಮಾರ್ಚ್ 24ರಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಚುನಾವಣೆ ಆಯೋಜಿಸಲಾಗಿತ್ತು. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯೆ ವಸುಮತಿ ನಾಗೇಶ್ ನಾಯಿರಿ ಅಧ್ಯಕ್ಷರಾಗಿ, ಬಿಜೆಪಿಯ ಉದಯ ಪೂಜಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

saligrama-town-panchayath

ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಅವರು ಪಟ್ಟಣ ಪಂಚಾಯಿತಿ ಮುಖ್ಯ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಮೂವರು ಮಹಿಳಾ ಸದಸ್ಯರಾದ ವಸುಮತಿ ನಾಗೇಶ್ ನಾಯಿರಿ, ಕುಸುಮ ಬಸವ ಪೂಜಾರಿ ಮತ್ತು ರತ್ನಾ ನಾಗರಾಜ್ ಗಾಣಿಗ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವಿದ್ದರು, ಕಾಂಗ್ರೆಸ್ ಪಕ್ಷದ ತಿರ್ಮಾನದಂತೆ ವಸುಮತಿ ನಾಗೇಶ್ ನಾಯಿರಿ ಅವರನ್ನೆ ಪಕ್ಷದಿಂದ ಬೆಂಬಲಿಸುವ ಕುರಿತು ಉಳಿದ ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯರು ನಿರ್ಧರಿಸಿದ್ದರು. ಆದರೆ ವಸುಮತಿ ನಾಗೇಶ್ ನಾಯಿರಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕುರಿತು ಬಿಜೆಪಿಯ ಸದಸ್ಯ ಭೋಜ ಪೂಜಾರಿ ಸೂಚಕರಾಗಿದ್ದರು. ಈ ಗೊಂದಲದ ನಡುವೆಯೇ ಯಾವುದೇ ಚುನಾವಣೆ ಇಲ್ಲದೇ ಅವಿರೋಧವಾಗಿ ಆಯ್ಕೆಯಾದ ವಸುಮತಿ ನಾಗೇಶ್ ನಾಯಿರಿ ಅವರು ಪಟ್ಟಣ ಪಂಚಾಯಿತಿ ಕಛೇರಿಯಿಂದ ವಿಜಯ ಮಾಲೆಯೊಂದಿಗೆ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕೆ.ಜಯಪ್ರಕಾಶ್ ಹೆಗ್ಡೆಯವರ ಪ್ರೋತ್ಸಾಹದ ಮೇರೆಗೆ ಬಿಜೆಪಿ ಬೆಂಬಲದಿಂದ ನಾಯಕಿಯಾಗಿದ್ದೇನೆ ಎಂದು ತಿಳಿಸಿದರು.
ಬಳಿಕ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಪಕ್ಷದ ತಿರ್ಮಾನದ ಮೇರೆಗೆ ವಸುಮತಿ ನಾಯಿರಿ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿ ಬೆಂಬಲಿಸಲಾಗಿದೆ. ಅಲ್ಲದೇ ಪಕ್ಷದ ತೀರ್ಮಾನದಂತ ಉಳಿದ ಇರ್ವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ತಿಳಿಸಲಾಗಿದೆ, ಆದರಿಂದ ಕಳೆದ 7ವರೆ ವರ್ಷದಿಂದ ವಿರೋಧವಾಗಿ ಕಾರ್ಯ ನಿರ್ವಹಿಸಿದ್ದ ನಾವು ಇನ್ನು ಮುಂದೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಆಡಳಿತ ಪಕ್ಷವಾಗಿ ಮುಂದುವರಿಯಲಿದ್ದೇವೆ ಎಂದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ಹಿಂದುಳಿದ ವರ್ಗ ಎ ಮೀಸಲಾತಿ ಬಂದಿರುವ ಹಿನ್ನಲೆಯಲ್ಲಿ ಬಿಜೆಪಿಯ ಉದಯ ಪೂಜಾರಿ ಮತ್ತು ಕಾಂಗ್ರೆಸ್‍ನ ಶ್ರೀನಿವಾಸ ಅಮೀನ್ ನಾಮಪತ್ರ ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಬಹುಮತವಿರುವ ಕಾರಣ, ಅಂತಿಮ ಗಳಿಗೆಯಲ್ಲಿ ಶ್ರೀನಿವಾಸ ಅಮೀನ್ ನಾಮಪತ್ರ ಹಿಂದೆ ಪಡೆದಿದ್ದು, ಕಣದಲ್ಲಿ ಉಳಿದ ಬಿಜೆಪಿಯ ಉದಯ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಗೆ ಪಟ್ಟಣ ಪಂಚಾಯಿತಿಯ ಬಹುತೇಕ ಎಲ್ಲಾ ಸದಸ್ಯರು ಹಾಜರಾಗಿದ್ದು, ಕಾಂಗ್ರೆಸ್‍ನ ರತ್ನಾ ನಾಗರಾಜ್ ಗಾಣಿಗ ಅಸಮಧಾನದ ಹಿನ್ನಲೆಯಲ್ಲಿ ಹಾಜರಾಗಿಲ್ಲ ಎನ್ನಲಾಗಿದೆ. ಒಟ್ಟಾರೆಯಾಗಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಉಚ್ಛಾಟಿತ ಕೆ.ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು ಮತ್ತು ಬಿಜೆಪಿ ಸದಸ್ಯರರು, ಕಾರ್ಯಕರ್ತರು ಒಟ್ಟಾಗಿ ವ್ಯೂಹ ರಚಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನವರು ಆರಿಸಿದ್ದ ವಸುಮತಿ ನಾಗೇಶ್ ನಾಯಿರಿ ಅವರನ್ನು ಬೆಂಬಲಿಸಿ ಹೈಜಾಕ್ ಮಾಡುವ ಮೂಲಕ ಕಾಂಗ್ರೆಸ್‍ಗೆ ಮುಖಭಂಗ ನೀಡಿದ್ದಾರೆ.
ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿಯ ಕಿರಣ್ ಕೊಡ್ಗಿ, ಸುಪ್ರಸಾದ್ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಗೀತಾಂಜಲಿ ಸುವರ್ಣ, ಕೋಟ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಹೆಗ್ಡೆ ಬೆಂಬಲಿಗರಾದ ಗೋಪಾಲ ಬಂಗೇರ, ಪ್ರಥ್ವಿರಾಜ್ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ರಾಜೇಶ್ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.


Spread the love