ಸಾಲು ಮರ ತಿಮ್ಮಕ್ಕ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ
ಚಿಕ್ಕ ಮಕ್ಕಳಲ್ಲಿ ಗಿಡ ನೆಡುವ ಆಸಕ್ತಿ ಬೆಳೆಸಿ ಪರಿಸರದ ಬಗ್ಗೆ ಜ್ಞಾನ ಮೂಡಿಸಿ – ಸಾಲುಮರ ತಿಮ್ಮಕ್ಕ
ವಂದನಾ ಪ್ರಶಸ್ತಿ ಸ್ವಚ್ಛಾ ಮಂಗಳೂರು ಅಭಿಯಾನಕ್ಕೆ ಸಹಕಾರ ನೀಡಿದ ಪ್ರಾಯೋಜಕರಿಗೆ, ಸ್ವಯಂಸೇವಕರಿಗೆ ಸಂದ ಗೌರವ – ಸ್ವಾಮಿ ಜಿತಕಾಮನಂದಜೀ ಮಹಾರಾಜ್
ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯಮಟ್ಟದ ವಾರ್ಷಿಕ ಪ್ರತಿಷ್ಠಿತ “ವಂದನಾ ಪ್ರಶಸ್ತಿ”ಯನ್ನು ಖ್ಯಾತ ವೃಕ್ಷ ಮಾತೆ ಸಾಲುಮರ ತಿಮ್ಮಕ್ಕ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗೆ ನಗರದ ಓಷಿಯನ್ ಪರ್ಲ್ ಹೋಟೇಲ್ ಸಭಾಂಗಣದಲ್ಲಿ 26.04.2019 ರಂದು ಜರಗಿದ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಈ ಪ್ರಶಸ್ತಿಯನ್ನು ಸಾಲುಮರ ತಿಮ್ಮಕ್ಕ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗೆ ಪರಿಸರ ಸಂರಕ್ಷಣೆ ಮತ್ತು ಮಂಗಳೂರು ಸ್ವಚ್ಛ ಅಭಿಯಾನಕ್ಕೆ ಸಲ್ಲಿಸಿದ ಸುಧೀರ್ಘ ಅನುಪಮ ಸೇವೆ, ಸಾಧಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಧಾನ ಮಾಡಲಾಯಿತು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್‍ರಾದ ರೋ| ಕಿರಣ್ ಪ್ರಸಾದ್ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರ ಅಪತ್ರಿಮ ಸಾಧನೆಯನ್ನು ಅಭಿನಂದಿಸಿರೋಟರಿ ಸಂಸ್ಥೆಯ ಸತ್ಕಾರ್ಯವನ್ನು ಶ್ಲಾಘಿಸಿದರು. ಬಳಿಕ ರೋಟರಿ ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ “ಸೆಂಟೊರ್” ಬಿಡುಗಡೆಗೊಳಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ದೇವದಾಸ್ ರೈರವರು ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿದ್ದು, ಈ ವಾರ್ಷಿಕ ಪ್ರಶಸ್ತಿಯನ್ನು ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿ ಪ್ರಸುತ್ತ ಸಾಲಿನ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.
ಸನ್ಮಾನಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿದ ಸಾಲುಮರದ ತಿಮ್ಮಕ್ಕನವರು ಸಂತಾನ ಭಾಗ್ಯ ಇಲ್ಲದ ಕೊರಗು ಮತ್ತು ವ್ಯಥೆ ನೀಗಿಸಲು ನಮ್ಮೂರು ಹುಲ್ಲಿಕಲ್ಲು ಗ್ರಾಮದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದೆ. ಈಗ ಅಲ್ಲಿ ಹೆರಿಗೆ ಆಸ್ಪತ್ರೆ ಕಟ್ಟುವ ಬಯಕೆ ಇದೆ ಎಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ರಾಮಕೃಷ್ಣ ಮಿಷನ್ ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಸ್ವಾಮಿ ಜಿತಕಾಮನಂದಜೀ ಮಹಾರಾಜ್ ಅವರು ಸಾಧಕರನ್ನು ಗುರುತಿಸಿ ಗೌರವಿಸುವುದು ರೋಟರಿ ಸಂಸ್ಥೆಯ ಒಂದು ನಿಸ್ವಾರ್ಥ ಮತ್ತು ಪ್ರಶಂಸನೀಯ ಸಮಾಜ ಸೇವಾ ಕಾರ್ಯ,ಈ ಪ್ರಶಸ್ತಿ ಮಂಗಳೂರು ಸ್ವಚ್ಛಾ ಅಭಿಯಾನಕ್ಕೆ ಸಹಕಾರ ನೀಡಿದ ಪ್ರಾಯೋಜಕರಿಗೆ, ಸ್ವಯಂಸೇವಕರಿಗೆ ಸಂದ ಗೌರವಎಂದು ನುಡಿದು ಅಕ್ಟೋಬರ್‍ನಿಂದ ಮಂಗಳೂರು ಪ್ರತಿಷ್ಠಾನದ ಹೆಸರಿನಿಂದ ಮುಂದುವರಿಯುವುದು ಎಂದು ಮಾಹಿತಿ ನೀಡಿದರು.
ರೋಟರಿ ಮಂಗಳೂರು ಸೆಂಟ್ರಲ್‍ನ ಅಧ್ಯಕ್ಷರಾದ ರೋ. ಸಂತೋಷ್ ಶೇಟ್ ರವರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಜೊಯೆಲ್ ಲೋಬೋ, ಚುನಾಯಿತ ಅಧ್ಯಕ್ಷರೋ| ಡಾ| ಜಯಪ್ರಕಾಶ್ ಪೂಂಜಾ, ರೋಟರ್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ರೋ. ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಶೆಲ್ಡಾನ್ ಕ್ರಾಸ್ತ ವಂದಿಸಿದರು.