Home Mangalorean News Kannada News ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ ! ಬಸ್‌ಗಿಂತ ವಿಮಾನಯಾನವೇ...

ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ ! ಬಸ್‌ಗಿಂತ ವಿಮಾನಯಾನವೇ ಅಗ್ಗ!

Spread the love

ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ ! ಬಸ್‌ಗಿಂತ ವಿಮಾನಯಾನವೇ ಅಗ್ಗ!

ಮಂಗಳೂರು:  ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ.

ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ- ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.

ವಾರಾಂತ್ಯದಲ್ಲಿ ಬಂದಿರುವು ದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗಿದೆ. ಅ.10ರಿಂದಲೇ ಕೆಲ ಖಾಸಗಿ ಬಸ್‌ಗಳ ಟಿಕೆಟ್ ದರಲ್ಲಿ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.

ಮಂಗಳೂರು ದಸರಾ ಕಣ್ಣುಂಬಿಕೊಳ್ಳಲು ಸಾಮಾನ್ಯವಾಗಿ ದೂರ ದೂರಿನಿಂದ ಸಾರ್ವಜನಿಕರು ಆಗಮಿಸುತ್ತಾರೆ. ಈ ಬಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 3ರಿಂದ 14ರ ವರೆಗೆ ಮಂಗಳೂರು ದಸರಾ ನಡೆಯಲಿದೆ. ಅ. 13ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಜರಗಲಿದೆ. ಈ ಬಾರಿ ಅ. 12 ಎರಡನೇ ಶನಿವಾರ ಮತ್ತು ಅ.13 ರವಿವಾರ ಇದ್ದ ಕಾರಣ ಅ.11ರಂದೇ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಗಳಿಂದ ಊರಿಗೆ ಜನ ಹೊರಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿದ ಖಾಸಗಿ ಬಸ್‌ಗಳು ಟಿಕೆಟ್ ದರ ಮೂರು ಪಟ್ಟು ಹೆಚ್ಚಿಸಿದೆ.

ಖಾಸಗಿ ಬಸ್‌ಗಳಲ್ಲಿ ಅ. 11ರಂದು ಬೆಂಗಳೂರಿನಿಂದ ಮಂಗಳೂರಿಗೆ ಅತೀ ಹೆಚ್ಚಿನ ದರ 3,500 ರೂ. ಇದೆ. ಅದೇ ರೀತಿ, ಮಂಗಳೂರಿನಿಂದ ಮೈಸೂರಿಗೆ 1,200 ರೂ., ಬಳ್ಳಾರಿಗೆ 950 ರೂ., ಬಾಗಲಕೋಟೆ 1,500 ರೂ., ಕೊಪ್ಪಳ 2,600 ರೂ., ವಿಜಯಪುರ 1,500 ರೂ. ಇದೆ. ಹಬ್ಬಕ್ಕೆ ಕೆಲ ದಿನ ಬಾಕಿ ಇರುವಾಗಿನಿಂದಲೇ ಏರುಗತಿಯಲ್ಲಿ ಸಾಗಿರುವ ಬಸ್ ಪ್ರಯಾಣ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣ ದರ ಸದ್ಯಕ್ಕೆ ಏರಿಕೆಯಾಗಿಲ್ಲ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಕಾರ್ಯಾಚರಿಸುವ ಹೆಚ್ಚುವರಿ ಬಸ್‌ಗಳಿಗೆ ಮಾಮೂಲಿ ದರಕ್ಕಿಂತ ಹೆಚ್ಚಿನ ದರ ಇರುತ್ತದೆ.

ನವರಾತ್ರಿ ಸಮಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಹೋಲಿಕೆ ಮಾಡಿದರೆ, ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿಲ್ಲ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 2,999 ರೂ. ಇದ್ದು ಅ. 11ರಂದು 3,239 ರೂ.ಗೆ ಏರಿಕೆ ಕಂಡಿದೆ. ರೈಲು ಪ್ರಯಾಣದಲ್ಲಿ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಈಗಾಗಲೇ ಟಿಕೆಟ್ ಭರ್ತಿಯಾಗಿದ್ದು, ಅನೇಕ ಮಂದಿ ವೈಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ.


Spread the love

Exit mobile version