ಸಾವಿರಾರು ಕೋಟಿ ವಕ್ಫ್ ಆಸ್ತಿ ನುಂಗಿರುವ ಬೇಗ್ ಪ್ರಧಾನಿಯ ಕಾಲ ಧೂಳಿಗೆ ಸಮ-ವೇದವ್ಯಾಸ ಕಾಮತ್

Spread the love

ಸಾವಿರಾರು ಕೋಟಿ ವಕ್ಫ್ ಆಸ್ತಿ ನುಂಗಿರುವ ಬೇಗ್ ಪ್ರಧಾನಿಯ ಕಾಲ ಧೂಳಿಗೆ ಸಮ-ವೇದವ್ಯಾಸ ಕಾಮತ್

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಚಿವ ರೋಶನ್ ಬೇಗ್ ಸಭ್ಯತೆಯ ಗಡಿಯನ್ನು ಮೀರಿ ತಮ್ಮ ಬೆಂಬಲಿಗರ ಎದುರು ಸಿಳ್ಳೆ, ಚಪ್ಪಾಳೆಗೋಸ್ಕರ ದೇಶದ ಪ್ರಧಾನಿಯನ್ನು ಕೀಳುಮಟ್ಟದಲ್ಲಿ ನಿಂದಿಸಿ, ಅವಹೇಳನ ಮಾಡಿದ್ದನ್ನು ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಖಂಡಿಸಿದ್ದಾರೆ.

ನರೇಂದ್ರ ಮೋದಿಯವರು ಭಾರತದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ವಿನಮ್ರತೆಯಿಂದ ತಾನು ದೇಶದ ಸೇವಕ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಗುಜರಾತಿನ ತಮ್ಮ ಮೂಲ ಮನೆಯಲ್ಲಿ ಸಾಮಾನ್ಯರಂತೆ ಬದುಕುತಿದ್ದಾರೆ. ದೇಶದ ಒಂದೇ ಒಂದು ರೂಪಾಯಿಯನ್ನು ತನ್ನ ಸ್ವಂತಕೋಸ್ಕರ ವ್ಯಯಿಸದ ನರೇಂದ್ರ ಮೋದಿಯವರು ಸಾವಿರಾರು ಕೋಟಿ ವಕ್ಫ್ ಆಸ್ತಿಯನ್ನು ನುಂಗಿ ನೀರು ಕುಡಿದಿರುವ ರೋಶನ್ ಬೇಗ್ ಅವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ. ಅಲ್ಪಸಂಖ್ಯಾತರ ವಕ್ಫ್ ಆಸ್ತಿಯ ಬಗ್ಗೆ ತನಿಖೆ ಮಾಡಿದರೆ ಈ ರೋಶನ್ ಬೇಗ್ ಜೀವನವೀಡಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಹಾಗಿರುವಾಗ ಕಳೆದ ಮೂರುವರೆ ವರ್ಷಗಳಲ್ಲಿ ತಮ್ಮ ಕುಟುಂಬವನ್ನು ರಾಜಕೀಯದ ಸನಿಹಕ್ಕೂ ತರದೇ ಸರಳ, ಉದಾತ್ತ ಜೀವನವನ್ನು ಸಾಗಿಸುತ್ತಿರುವ ನರೇಂದ್ರ ಮೋದಿಯವರ ಪಾದ ಧೂಳಿಗೂ ರೋಶನ್ ಬೇಗ್ ಸಮನಲ್ಲ ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಟೀಕೆ ಸ್ವಾಭಾವಿಕ. ಆದರೆ ವಿದ್ಯಾವಂತರು, ಅನುಭವಿಗಳು, ಘನತೆ ಇರುವ ವ್ಯಕ್ತಿಗಳು ಮಾತನಾಡುವಾಗ ನಾಲಿಗೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳುತ್ತಾರೆ. ಆದರೆ ರೋಶನ್ ಬೇಗ್ ಗೆ ಸಭ್ಯತೆಯ ಅರಿವೇ ಇಲ್ಲ. ಮೋದಿಯವರನ್ನು ನರಹಂತಕ ಎಂದು ಸೋನಿಯಾ ಗಾಂಧಿಯವರು ಟೀಕಿಸುವಾಗಲೂ ಮೋದಿ ಸೌಜನ್ಯದಿಂದ ತಮ್ಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ. ಹಾಗಿರುವಾಗ ರೋಶನ್ ಬೇಗ್ ಬಳಸಿದ ಶಬ್ದದಿಂದ ಕಾಂಗ್ರೆಸ್ಸಿಗರಿಗೆ ನಾಚಿಕೆ, ಅಸಹ್ಯ ಮೂಡಿದ್ದಲ್ಲಿ ಬೇಗ್ ಅವರನ್ನು ಸಚಿವ ಸಂಪುಟದಿಂದ ಉಚ್ಚಾಟಿಸುವುದು ಸೂಕ್ತ. ಅಧಿಕಾರದ ಮದದಲ್ಲಿ ಯಾರನ್ನೂ ಬೇಕಾದರೂ ಹೇಗೆ ಬೇಕಾದರೂ ಬಾಯಿಗೆ ಬಂದಂತೆ ಬೈದಲ್ಲಿ ಮುಂದಿನ ಬಾರಿ ಜನರೇ ಮನೆಗೆ ಕಳುಹಿಸಲಿದ್ದಾರೆ. ಅದರ ನಂತರ ಯಾವುದಾದರೂ ಮಾನಸಿಕ ಕೇಂದ್ರದಲ್ಲಿ ಕಾಂಗ್ರೆಸ್ಸಿಗರು ಚಿಕಿತ್ಸೆ ಕೊಡಿಸಲಿ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.


Spread the love