ಸಾಸ್ತಾನ ಚರ್ಚಿನಲ್ಲಿ ನಟನೆಯೊಂದಿಗೆ ಯೇಸುವಿನ ಕಷ್ಟಗಳ ನೆನಪು

Spread the love

ಸಾಸ್ತಾನ ಚರ್ಚಿನಲ್ಲಿ ನಟನೆಯೊಂದಿಗೆ ಯೇಸುವಿನ ಕಷ್ಟಗಳ ನೆನಪು

ಬ್ರಹ್ಮಾವರ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಗುಡ್ ಫ್ರೈಡೆ ಅಥವ ಶುಭ ಶುಕ್ರವಾರವನ್ನು ಬ್ರಹ್ಮಾವರ ತಾಲೂಕಿನಾದ್ಯಂತ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಚರ್ಚುಗಳಲ್ಲಿ ಭಕ್ತಾದಿಗಳು ಪ್ರಾರ್ಥನೆ, ಧ್ಯಾನ ಯೇಸುವಿನ ಕಷ್ಟಗಳನ್ನು ನೆನಪಿಸುವ ಶಿಲುಬೆಯ ಹಾದಿ ವಾಚನದ ಕಾರ್ಯಕ್ರಮಗಳು ಜರುಗಿದವು.

ಸಾಸ್ತಾನದ ಸಂತ ಅಂತೋನಿ ಚರ್ಚಿನಲ್ಲಿ ಯುವ ವಿದ್ಯಾರ್ಥಿ ಸಂಚಾಲನ ಹಾಗೂ ಇತರ ಸಂಘಟನೆಗಳ ಸದಸ್ಯರು ಜೊತೆಯಾಗಿ ಸೇರಿ ಯೇಸು ಕ್ರಿಸ್ತರು ಬಂಧನಕ್ಕೆ ಒಳಗಾಗುವುದರಿಂದ ಹಿಡಿದ ಶಿಲುಬೆಯ ಮೇಲೆ ಮರಣವನ್ನಪ್ಪುವುದರ ವರೆಗಿನ ಅನೇಕ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಅವಲೋಕಿಸಿ ಪ್ರಾರ್ಥಿಸುತ್ತಾ ಸಾಗುವ ಶಿಲುಬೆಯ ಹಾದಿಯ ಪ್ರಕ್ರಿಯೆಯನ್ನು ಚರ್ಚಿನ ಯುವಕರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ನಟನೆಯ ಮೂಲಕ ಆಡಿ ತೋರಿಸಿದರು.

ಈ ಶಿಲುಬೆಯ ಹಾದಿಯಲ್ಲಿ ಯೇಸುವಿನ ಸಾವಿನ ಕೊನೆಯ ಕ್ಷಣಗಳನ್ನು ಮೆಲುಕು ಹಾಕಲಾಗುತ್ತದೆ. ಚರ್ಚಿನ ಧರ್ಮಗುರುಗಳಾದ ವಂ ಜೋನ್ ವಾಲ್ಟರ್ ಮೆಂಡೊನ್ಸಾ ನೇತೃತ್ವದಲ್ಲಿ ಬ್ರದರ್ ಪ್ರದೀಪ್ ಕಾರ್ಡೋಜಾ ಮತ್ತು ಅನಿತಾ ಅಲ್ಮೇಡಾ ಅವರ ನಿರ್ದೇಶನದೊಂದಿಗೆ ವೈಸಿಎಸ್, ವೇದಿ ಸೇವಕರು, ಕೆಥೊಲಿಕ್ ಸಭಾ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಸೇರಿಕೊಂಡು ಶಿಲುಬೆಯ ಹಾದಿಯನ್ನು ಅತ್ಯುತ್ತಮವಾಗಿ ಮನಮುಟ್ಟುವಂತೆ ಆಡಿ ತೋರಿಸಲಾಯಿತು.

ಶಿಲುಬೆಯ ಹಾದಿಯಲ್ಲಿ ಯೇಸುವಿಗೆ ಮರಣ ದಂಡನೆಯನ್ನು ಹೇರಿದ ಬಳಿಕ ಯೇಸುಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತು ಮೂರು ಬಾರಿ ಬೀಳುವುದು, ಶಿಲುಬೆಯನ್ನು ಹೊತ್ತು ಸಾಗಲು ಕಷ್ಟವಾದಾಗ ಯೇಸುವಿನ ಸಹಾಯಕ್ಕೆ ಬಂದ ಸಿರೇನ್ ನಗರದ ಸಿಮಾಂವ್ ದ್ರಶ್ಯ, ಯೇಸು ಶಿಲುಬೆ ಹೊತ್ತು ಸಾಗುತ್ತಿದ್ದಾಗ ಅವರ ಆಯಾಸಭರಿತ ಮುಖವನ್ನು ಕರವಸ್ತ್ರದಲ್ಲಿ ಒರೆಸಲು ಬಂದ ವೆರೊನಿಕಾ, ಯೇಸುವನ್ನು ಶಿಲುಬೆಗೇರಿಸಿ ಮೊಳೆಯನ್ನು ಜಡಿಯುವ ದೃಶ್ಯಗಳು ನೆರೆದಿದ್ದ ಭಕ್ತರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು.


Spread the love