ಸಾಸ್ತಾನ ಟೋಲ್‌ ಗೇಟ್ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಸಮಿತಿ ವತಿಯಿಂದ ಪ್ರತಿಭಟನೆ

Spread the love

ಸಾಸ್ತಾನ ಟೋಲ್‌ ಗೇಟ್ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಸಮಿತಿ ವತಿಯಿಂದ ಪ್ರತಿಭಟನೆ

ಬ್ರಹ್ಮಾವರ: ಸಂಪೂರ್ಣ ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಸಾಸ್ತಾನ ಟೋಲ್ ಬಳಿ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷರಾದ ಶ್ಯಾಮ ಸುಂದರ ನಾಯರಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಟ ಜಿಪಂ ವ್ಯಾಪ್ತಿಯ ಕಮರ್ಷಿಯಲ್ ವಾಹನಗಳಿಗೆ ಟೋಲ್ ಸಂಗ್ರಹ ಮಾಡದಂತೆ ಸ್ಪಷ್ಟ ಸೂಚನೆಯನ್ನುನೀಡಲಾಗಿತ್ತು. ಸ್ಥಳೀಯ ಶಾಲೆಯ ವಾಹನಗಳಿಗೆ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ಮೂಲಕ ಪುನಃ ಸಮಸ್ಯೆಗಳನ್ನು ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿದ್ದು ಅದನ್ನು ರಿಪೇರಿ ಮಾಡದೆ, ಬೀದಿ ದೀಪಗಳು ಕೂಡ ಉರಿಯದ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ರೀತಿಯ ಸ್ಪಂದನೆ ಟೋಲ್ ಅಧಿಕಾರಿಗಳಿಂದ ಲಭಿಸುತ್ತಿಲ್ಲ. ಪಾದಾಚಾರಿಗಳು ಸಂಚರಿಸುವ ರಸ್ತೆಗಳಲ್ಲಿ ಕೂಡ ಹೊಂಡಬಿದ್ದು ಸಮಸ್ಯೆಗಳು ಉಂಟಾಗಿದ್ದು, ಎಕ್ಸ್ ಪ್ರೆಸ್ ವೇಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಡ್ಡಾಯಾಗಿದ್ದರೂ ಕೂಡ ಅದಕ್ಕೂ ಸ್ಪಂದನೆ ನೀಡುತ್ತಿಲ್ಲ. ಟೋಲ್ ಅಧಿಕಾರಿಗಳ ನಿರ್ಲಕ್ಷತನಕ್ಕೆ ಪ್ರತಿಬಾರಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ನಾಚಿಕೇಗೇಡು ಎಂದರು.

ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮಾತನಾಡಿ ಟೋಲ್ ಗುತ್ತಿಗೆಯನ್ನು ಇಂಗ್ಲೆಡ್ ಮೂಲದ ಕೆಕೆಆರ್ ಎಂಬ ಕಂಪೆನಿ ವಹಿಸಿಕೊಂಡಿದ್ದು ಸ್ಥಳೀಯರ ಸಮಸ್ಯೆಗಳ ಕುರಿತು ಮಾತನಾಡಿದರೆ ಯಾವುದೇ ರೀತಿಯಲ್ಲಿ ಕ್ಯಾರೇ ಅನ್ನುತ್ತಿಲ್ಲ. ಸಾಸ್ತಾನಕ್ಕೆ ಈ ಟೋಲ್ ಒಂದು ಶನಿಯಂತೆ ಒಕ್ಕರಿಸಿದ್ದು 2016 ರಿಂದ ಪ್ರತಿ ವಿಚಾರಕ್ಕೂ ಇಲ್ಲಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಒದಗಿದೆ. ರಸ್ತೆಗೆ ಪ್ಯಾಚ್ ವರ್ಕ್ ಮಾಡಲು ಹೇಳಿದರೆ ಹಳೆಯ ಡಾಂಬರಿನ ಹುಡಿಯನ್ನು ಹಾಕಿ ಕಣ್ಣೋರೆಸುವ ತಂತ್ರ ಮೂಲಕ ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದರು.

ಸ್ಥಳಕ್ಕೆ ಟೋಲ್ ಅಧಿಕಾರಿಗಳು ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರ ಮೇರೆಗೆ ಟೋಲ್ ಸಿಬಂದಿಗಳು ಆಗಮಿಸಿದ್ದು ಹಿರಿಯ ಅಧಿಕಾರಿಗಳು ಬರದಿದ್ದಕ್ಕೆ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ನ. 11 ರಂದು ಸಭೆ ನಡೆಸಲು ನಿರ್ಧಾರ
ಬಳಿಕ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ಟೋಲ್ ಹಿರಿಯ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಸಂಪರ್ಕಿಸಿ ಸೋಮವಾರ ನ.11 ರಂದು ಬ್ರಹ್ಮಾವರದಲ್ಲಿ ಟೋಲ್ ನ ಹಿರಿಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು. ಸಭೆ ನಡೆಯುವ ವರೆಗೆ ಯಾವುದೇ ಸ್ಥಳೀಯ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ, ಶಾಲಾ ವಾಹನಗಳಿಗೆ ಟೋಲ್ ಪಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಟೋಲ್ ಸಿಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಪ್ರತಿಭಟನೆಯಲ್ಲಿ ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ, ಸೀರಿಯನ್ ಚರ್ಚಿನ ಧರ್ಮಗುರು ವಂ|ಡೇವಿಡ್ ಕ್ರಾಸ್ತಾ, ಹೋರಾಟ ಸಮಿತಿಯ ಪ್ರಮುಖರಾದ ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ಡೆನಿಸ್ ಡಿಸೋಜಾ, ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್, ವಾಹನ ಚಾಲಕರು ಮತ್ತು ಮ್ಹಾಲಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments