ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ಭ್ರಾತೃತ್ವದ ಭಾನುವಾರ ಆಚರಣೆ
ಬ್ರಹ್ಮಾವರ: ಸಾಸ್ತಾನ ಸಂತ ಅಂತೋನಿಯವರ ಚರ್ಚಿನಲ್ಲಿ ವಾರ್ಷಿಕ ಮಹೋತ್ಸವದ ಪ್ರಯುಕ್ತ ಭ್ರಾತೃತ್ವದ ಭಾನುವಾರವನ್ನು ಆಚರಿಸಲಾಯಿತು.
ಭ್ರಾತೃತ್ವದ ಭಾನುವಾರ ಹಾಗೂ ಪರಮಪ್ರಸಾದ ಆರಾಧನೆಯ ಪವಿತ್ರ ಬಲಿಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಆಧ್ಯಾತ್ಮಿಕ ಆಯೋಗದ ನಿರ್ದೇಶಕರಾದ ವಂ|ಸಿರಿಲ್ ಲೋಬೊ ವಹಿಸಿದ್ದರು.
ತಮ್ಮ ಪ್ರವಚನದಲ್ಲಿ ನಮ್ಮ ಕುಟುಂಬಗಳನ್ನು ಯೇಸು, ಮೇರಿ ಮತ್ತು ಜೋಸೆಫ್ ಅವರ ಕುಟುಂಬಗಳಂತೆ ಪರಸ್ಪರ ಅನ್ಯೋನ್ಯತೆಯಿಂದ ಬದುಕನ್ನು ಸಾಗಿಸುವ ಮೂಲಕ ಇತರರೊಂದಿಗೆ ಭ್ರಾತೃತ್ವದ ಸಂಬಂಧವನ್ನು ರೂಡಿಸಿಕೊಂಡು ಪವಿತ್ರ ಧರ್ಮಸಭೆಗೆ ಸಾಕ್ಷಿಗಳಾಗುವಂತೆ ಕರೆ ನೀಡಿದರು.
ದಿವ್ಯ ಬಲಿಪೂಜೆಯ ಬಳಿಕ ಪವಿತ್ರ ಪರಮ ಪ್ರಸಾದದ ಆರಾಧನೆಯನ್ನು ನೇರವೇರಿಸಿ ಚರ್ಚ್ ವಠಾರದಲ್ಲಿ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಆಶೀರ್ವಚನ ನೀಡಲಾಯಿತು.
ಬಲಿಪೂಜೆಯ ಬಳಿಕ ಭಾರತೀಯ ಕಥೊಲಿಕ ಯುವ ಸಂಚಾಲನ ಸಾಸ್ತಾನ ಘಟಕದ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚರ್ಚಿನ ಮಕ್ಕಳಿಗಾಗಿ ಆಯೋಜಿಸಿದ್ದ ಗೋದಲಿ ನಿರ್ಮಾಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ, ಅತಿಥಿ ಧರ್ಮಗುರು ವಂ|ರೊಕಿ ಬಾಂಜ್, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಐವಾನ್ ಡಿ’ಆಲ್ಮೇಡಾ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.