Home Mangalorean News Kannada News ಸಾಸ್ತಾನ: ಸರ್ವಿಸ್ ರಸ್ತೆಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ

ಸಾಸ್ತಾನ: ಸರ್ವಿಸ್ ರಸ್ತೆಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ

Spread the love

ಸಾಸ್ತಾನ: ಸರ್ವಿಸ್ ರಸ್ತೆಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಚತುಷ್ಪಥ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಮಾಬುಕಳದಿಂದ ಕೋಟದವರೆಗೆ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಅತ್ಯುತ್ತಮವಾದ ಬೆಂಬಲ ದೊರಕಿತು.

ಮಾಬುಕಳ ಬಸ್ ಸ್ಟ್ಯಾಂಡಿನಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆಯು ಮಾಬುಕಳ, ಸಾಸ್ತಾನ, ಸಾಲಿಗ್ರಾಮ ಮಾರ್ಗವಾಗಿ ಸಾಗಿ ಕೋಟದಲ್ಲಿ ಸಮಾಪನಗೊಂಡಿತು.

ಸುಮಾರು ಮೂರುವರೆ ವರುಷಗಳ ಹಿಂದೆಯೇ ಕುಮ್ರಗೋಡು, ಮಾಬುಕಳ, ಸಾಸ್ತಾನ, ಸಾಲಿಗ್ರಾಮ, ಕೋಟ ವ್ಯಾಪ್ತಿಯ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಇಟ್ಟು ಹೋರಾಟವನ್ನು ಮಾಡುತ್ತಾ ಬಂದಿರುತ್ತೇವೆ. ಜನ ಸಾಮಾನ್ಯರ ಬಹುಮುಖ್ಯ ಬೇಡಿಕೆಯಾದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡುವಲ್ಲಿ ನವಯುಗ ಕಂಪೆನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಮ್ಮ ಬೇಡಿಕೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಅಸಡ್ಡೆ ಪ್ರವೃತ್ತಿಯನ್ನು ಹಾಗೂ ಬೇಜವಾಬ್ದಾರಿ ಪದ್ಧತಿಯನ್ನು ಅನುಸರಿಸುತ್ತಾ ಬಂದಿದೆ.

ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಸಂಭವಿಸಿವೆ. ಅಲ್ಲದೆ ಸೈಕಲ್ ಸವಾರರಿಗೂ ಹಾಗೂ ಪಾದಚಾರಿಗಳಿಗೆ ನಿತ್ಯ ಸಂಚಾರಕ್ಕೆ ತೊಡಕಾಗಿದೆ ಹಾಗೂ ಮೋಟಾರು ವಾಹನ ಕಾಯಿದೆಯಿಂದಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರಿಗೆ ಪೋಲಿಸರು ದಂಡ ಹಾಕುವುದರಿಂದ 5೦ ಮೀಟರ್ ಕ್ರಮಿಸಬೇಕಾದ ದಾರಿಗೆ 3 ಕಿ.ಮೀ. ಸುತ್ತು ಬಳಸಿ ಬರುವ ಪ್ರಮೇಯ ಈ ಭಾಗದ ವಾಹನ ಸವಾರರಿಗೆ ಎದುರಾಗಿದೆ ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜನಪ್ರತಿನಿಧಿಗಳು, ಪೋಲಿಸ್ ಇಲಾಖೆ, ನವಯುಗ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಹಲವಾರು ಸಭೆಗಳನ್ನು ನಡೆಸಿಯೂ ಸರ್ವೀಸ್ ರಸ್ತೆ ವಿಚಾರದಲ್ಲಿ ಯಾವುದೇ ಫಲಶ್ರುತಿ ಕಂಡುಬಂದಿಲ್ಲ ಸರ್ವೀಸ್ ರಸ್ತೆ ಎನ್ನುವುದು ಪ್ರತಿಯೊಬ್ಬರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಇನ್ನಾದರೂ ಇಲಾಖೆ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರುಗಳು ವಿವಿಧ ಸಂಘ ಸಂಸ್ಥೆಗಳು, ವಾಹನ ಚಾಲಕರು ಮಾಲಕರು, ಮಹಿಳೆಯರು, ಸ-ಸಹಾಯ ಸಂಘಗಳು, ಸ್ಥಳೀಯಾಡಳಿತ ಹಾಗೂ ನಾಗರಿಕರು ಜೊತೆಗೂಡಿದ್ದರು.

ಪ್ರತಿಭಟನೆಯ ನೇತೃತ್ವವನ್ನು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ ವಹಿಸಿದ್ದರು.

ಪ್ರತಿಭಟನೆಗೆ ಉಡುಪಿ ಡಿವೈಎಸ್ಪಿ ಜೈಶಂಕರ್, ಉಡುಪಿ ಸಿಪಿಐ ಮಂಜುನಾಥ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಕೋಟ, ಬ್ರಹ್ಮಾವರ, ಮಲ್ಪೆ ಠಾಣಾಧಿಕಾರಿಗಳಾದ ನಿತ್ಯಾನಂದಗೌಡ, ರಾಘವೇಂದ್ರ, ಮಧು ಇವರುಗಳ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


Spread the love

Exit mobile version