ಸಾಸ್ತಾನ : ಸ್ಥಳೀಯ ಸ್ವಂತ ಖಾಸಗಿ, ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ಸಂಸದ ಕೋಟ

Spread the love

ಸಾಸ್ತಾನ : ಸ್ಥಳೀಯ ಸ್ವಂತ ಖಾಸಗಿ, ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ಸಂಸದ ಕೋಟ
ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಾಸ್ತಾನ ಸುಂಕ ವಸೂಲಾತಿ ಕೇಂದ್ರದ ಸ್ಥಳೀಯ ಜನರ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದ ಹಾಗೆ ರಿಯಾಯಿತಿಯಲ್ಲಿ ಕಲ್ಪಿಸಬೇಕೆಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ತಿಳಿಸಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್ ಗಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಾಸ್ತಾನ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಲಿಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದು, ಸ್ಥಳೀಯ ಜನರ ಸುಂಕ ವಸೂಲಾತಿ ಕೇಂದ್ರದ ಸುತ್ತಮುತ್ತ ವಾಸವಿದ್ದು, ದೈನಂದಿನ ಪ್ರತಿಯೊಂದು ಕಾರ್ಯಕ್ಕೂ ಟೋಲ್ ಅನ್ನು ದಾಟುವ ಪ್ರಸಂಗ ಒದಗಿ ಬರಲಿದ್ದು, ಪ್ರತಿ ಬಾರಿಯೂ ಶುಲ್ಕ ಪಾವತಿ ಮಾಡಲು ಕಷ್ಟ ಸಾಧ್ಯವಾಗಿರುತ್ತದೆ.

ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಖಾಸಗಿ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಬೇಕೆಂದು ತಿಳಿಸಿದರು.

ಸಂತಕೆಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ರಸ್ತೆ ಕಾಮಗಾರಿಯನ್ನು ಜನವರಿ 7 ಒಳಗಾಗಿ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ರಾ.ಹೆ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಕೇಳಿಬರುತ್ತಿವೆ. ಇವುಗಳಿಗೆ ಕಾರಣ ರಸ್ತೆಯಲ್ಲಿನ ಅವೈಜ್ಞಾನಿಕ ಕೆಲಸ ಕಾರ್ಯಗಳು ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ಉಂಟಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಅಗತ್ಯವಿರುವ ಕಡೆ ಸರ್ವೀಸ್ ರಸ್ತೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ ದುರಸ್ಥಿ, ಜಂಕ್ಷನ್ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು

ಜಿಲ್ಲಾಧಿಕಾರಿ ವಿದ್ಯಾ ಕುಮಾರಿ.ಕೆ ರವರು ಮಾತನಾಡಿ ಕೋಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ1552ಸ್ಥಳೀಯ ವಾಹನಗಳು 53130ಕ್ಕೂ ಹೆಚ್ಚು ಬಾರಿ ಸಾಸ್ತಾನ ಟೋಲ್ ನಲ್ಲಿ ಸಂಚರಿಸುತ್ತವೆ ಇವೆಲ್ಲವಕ್ಕೂ ಟೋಲ್ ಸುಂಕ ವಿನಾಯಿತಿ ನೀಡಬೇಕೆಂದು ಸ್ಥಳೀಯ ಜನರ ಬೇಡಿಕೆ ಇದೆ. ಈ ವ್ಯಾಪ್ತಿಯ ಸ್ಥಳೀಯ ಸ್ವಂತ ಖಾಸಗಿ ವಾಹನಗಳಿಗೆ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ವಿನಾಯಿತಿ ಕೊಡಲಾಗುವುದು ಲಾರಿ, ಬಸ್ಸು, ಟಿಪ್ಪರ್ ಸೇರಿದಂತೆ ಮತ್ತಿತರ ಭಾರಿ ವಾಹನಗಳು ರಿಯಾಯಿತಿ ಪಾಸ್ ಅನ್ನು ಪಡೆದು ಸಂಚರಿಸಬಹುದಾಗಿದೆ. ಈ ಹಿಂದೆ ತಿಂಗಳಿಗೆ ಸ್ಥಳೀಯ 34 ಟಿಪ್ಪರ್ ಗಳಿಗೆ ತಿಂಗಳಿಗೆ 6705 ರೂಪಾಯಿ ಕಟ್ಟಿ 50 ರಿಯಾಯತಿ ಪಾಸ್ ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು ಆದರೆ ಇನ್ನೂ ಮುಂದೆ ಎಷ್ಟು ಬಾರಿ ಬೇಕಾದರೂ ಸಂಚರಿಸಲು ಅವಕಾಶವಿದೆ ಎಂದರು.

ಸಭೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರರುಗಳಾದ ಪ್ರತಿಭಾ ಹಾಗೂ ಶ್ರೀಕಾಂತ್,, ಗುತ್ತಿಗೆದಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments