‘ಸಿಂಪಲ್’ ಪೂಜಾರಿ ಎದುರು ‘ಸಜ್ಜನ’ ಜೆಪಿ ಹೆಗ್ಡೆ ಅಭ್ಯರ್ಥಿ!
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಸಿಂಪಲ್ ಕೋಟ ಶ್ರೀನಿವಾಸ ಪೂಜಾರಿ ಎದರು ಕಾಂಗ್ರೆಸ್ ನಿಂದ ಸಜ್ಜನ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ ಅಧಿಕೃತವಾಗಿದೆ. ಗುರುವಾರ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಹೆಗ್ಡೆಯವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಮೂಲತಃ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದವರಾದ ಜಯಪ್ರಕಾಶ್ ಹೆಗ್ಡೆ ಅವರು ಹೈಕೋರ್ಟಿನ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ದಿ. ಕೆ ಚಂದ್ರಶೇಖರ ಹೆಗ್ಡೆ ಅವರ ಪುತ್ರ.
72ರ ಹರೆಯದ ಹೆಗ್ಡೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗುವುದು ಖಚಿತವಾಗಿತ್ತು. ಈ ಹಿಂದೆ ಕಾಂಗ್ರೆಸ್ ನಿಂದ ಅವರು ಒಂದು ಬಾರಿ ಇದೇ ಕ್ಷೇತ್ರದಿಂದ ಸಂಸದರೂ ಆಗಿದ್ದರು.
1994 ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ವಿಧಾನಸಭೆ ಪ್ರವೇಶಿಸಿದ್ದ ಹೆಗ್ಡೆ ಅದೇ ಅವಧಿಯಲ್ಲಿ ಜೆ ಹೆಚ್ ಪಟೇಲರ ಸಂಪುಟದಲ್ಲಿ ಅವಿಭಜಿತ ದಕ ಜಿಲ್ಲೆಯ ಉಸ್ತುವಾರಿ, ಮೀನುಗಾರಿಕಾ ಸಚಿವರೂ ಆಗಿದ್ದರು. ನಂತರ ಜನತಾ ಪಕ್ಷ ಒಡೆದ ಮೇಲೆ 1994 ಮತ್ತು 2004 ರಲ್ಲಿ 2 ಬಾರಿ ಪಕ್ಷೇತರರಾಗಿ ಬ್ರಹ್ಮಾವರದಿಂದ ಆಯ್ಕೆಯಾಗಿದ್ದರು.
1997ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭದಲ್ಲಿ ಬ್ರಹ್ಮಾವರ ಕ್ಷೇತ್ರ ರದ್ದಾದಾಗ ಅವರು ಕಾಂಗ್ರೆಸ್ ಸೇರಿ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು.
2012 ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಿದರು.
ಆದರೆ 2015ರಲ್ಲಿ ವಿಧಾನಪರಿಷತ್ ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಬಂಡಾಯವಾಗಿ ಸ್ಪರ್ಧಿಸಿ ಸೋತರು. ಇವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಕಾಂಗ್ರೆಸ್ ನಿಂದ 6 ವರ್ಷಗಳ ಕಾಲ ಅಮಾನತುಗೊಳಿಸಲಾಯಿತು.
ನಂತರ 2017ರಲ್ಲಿ ಬಿಜೆಪಿ ಸೇರಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದರು. ಈಗ ಆಯೋಗದ ಅಧಿಕಾರವಧಿ ಮುಗಿದಿದ್ದು, ಮತ್ತೆ ಕಾಂಗ್ರೆಸ್ ಸೇರಿ ಲೋಕಸಭಾ ಕಣಕ್ಕಿಳಿದಿದ್ದಾರೆ.
ಶಾಸಕರಾಗಿ ಸಂಸದರಾಗಿ ಸಾಕಷ್ಟು ಕೆಲಸ ಮಾಡಿರುವ ರಾಜಕಾರಣದ ಅನುಭವವೂ ಇರುವ ತೂಕದ ಮಾತುಗಳನ್ನಾಡುವ ಹೆಗ್ಡೆ ಅವರು ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಂಡವರು.