ಸಿಟಿ ರವಿಯ ಅಶ್ಲೀಲ ಮಾತುಗಳು ಬಿಜೆಪಿ ಸಂಸ್ಕೃತಿಯ ದ್ಯೋತಕವಾಗಿದೆ : ನವೀನ್ ಸಾಲ್ಯಾನ್
ಉಡುಪಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿರುವುದು ಬಿಜೆಪಿಗರ ಅಶ್ಲೀಲ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೀನುಗಾರಿಕಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ನವೀನ್ ಸಾಲ್ಯಾನ್ ಹೇಳಿದ್ದಾರೆ.
ಒರ್ವ ಜವಾಬ್ದಾರಿಯುತ ಪರಿಷತ್ ಸದಸ್ಯರಾಗಿ ವರ್ತಿಸಬೇಕಿದ್ದ ಬಿಜೆಪಿ ಸದಸ್ಯ ಸಿ ಟಿ ರವಿ ಅವರು ಒರ್ವ ಮಹಿಳಾ ಸಚಿವರಿಗೆ ಅಶ್ಲೀಲ ಪದ ಬಳಸಿರುವುದಕ್ಕೆ ಈಗಾಗಲೇ ಪ್ರಕರಣ ದಾಖಲಾಗಿದೆ ಮುಂದುವರಿದು ಸಿ ಟಿ ರವಿ ಅವರ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಮುಂದಿನ ದಿನಗಳಲ್ಲಿ ಬೇರೆ ಯಾರೂ ಕೂಡ ಇಂತಹ ಅಸಂವಿಧಾನಿಕ ವರ್ತನೆ ತೋರಿದ್ದಲ್ಲಿ ಇದೊಂದು ಪಾಠವಾಗಬೇಕು.
సిటి ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಬಗ್ಗೆ ಮಾತನಾಡುವಾಗ ತನ್ನ ಮನೆಯಲ್ಲಿರುವ ತಾಯಿ ಕೂಡ ಒಂದು ಹೆಣ್ಣು ಎನ್ನುವುದನ್ನು ಮರೆತಿದ್ದಾರೆ ಅನಿಸುತ್ತದೆ. ತಮ್ಮ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದಾರೆ ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ಅದು ಕ್ರಿಮಿನಲ್ ಅಪರಾಧವಾಗಿದೆ. ನಿಟ್ಟಿನಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಂಡು ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.