ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಧನ; ಉಡುಪಿ ಬಿಷಪ್ ಸಂತಾಪ

Spread the love

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ನಿಧನ; ಉಡುಪಿ ಬಿಷಪ್ ಸಂತಾಪ

ಉಡುಪಿ: “ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಧರ್ಮ” ಎಂದು ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದ ಮಹಾತ್ಮ ಡಾ| ಶ್ರೀ ಶಿವಕುಮಾರ ಸ್ವಾಮೀಜಿಯವರ ಅಗಲಿಕೆಯಿಂದ ನಮಗೆ ಅತೀವ ದುಃಖವಾಗಿದೆ. ನಡೆದಾಡುವ ದೇವರೆಂಬ ಹೆಸರಿನಿಂದ ಭಕ್ತರಿಗೆ ಪ್ರಿಯವಾಗಿದ್ದ ಅವರ ಆತ್ಮ ಭಗವಂತನಲ್ಲಿ ಐಕ್ಯವಾಗಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಶೋಕ ಸಂದೇಶದಲ್ಲಿ  ಪ್ರಾರ್ಥಿಸಿದ್ದಾರೆ

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು ಕರ್ನಾಟಕ ರತ್ನ ಡಾ| ಶ್ರೀ ಶಿವಕುಮಾರ ಸ್ವಾಮಿಗಳು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ಹನ್ನೆರಡನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ ‘ಕಾಯಕವೇ ಕೈಲಾಸ’ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಕಳೆದ ಸುಮಾರು ತೊಂಬತ್ತು ವರ್ಷಗಳಿಂದ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದರು. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಅಪಾರ ಕಳಕಳಿಯಿದ್ದ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ತಮ್ಮ ಮಠದಲ್ಲಿ ಜಾತಿ-ಮತ ಭೇದವಿಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು.

ಪೂಜ್ಯ ಸ್ವಾಮೀಜಿಗಳು ಆರಂಭಿಸಿದ್ದ ದಾಸೋಹ ಕಾರ್ಯ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಂದುವರಿಯಲಿ ಎಂದು ಹಾರೈಸುತ್ತಾ, ದಿವಂಗತ ಸ್ವಾಮೀಜಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಶ್ರೀಗಳು ದೈವಸನ್ನಿಧಿಯಲ್ಲಿ ಚಿರಶಾಂತಿಯಲ್ಲಿ ನೆಲೆಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.


Spread the love