ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅಂಟಿದ ಶನಿ: ಜನಾರ್ದನ ಪೂಜಾರಿ
ಮಂಗಳೂರು: ‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಶನಿ. ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು. ಅವರಿಗೆ ಹೆಚ್ಚು ಅಧಿಕಾರ ಕೊಡುವುದೇ ತಪ್ಪು. ಹೈಕಮಾಂಡ್ ಈ ತಪ್ಪನ್ನು ಮಾಡುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಅಧಿಕಾರ ಕೊಡುತ್ತಿರುವುದು ತಪ್ಪು ಎಂಬುದನ್ನು ಹೈಕಮಾಂಡ್‌ಗೂ ತಿಳಿಸಿದ್ದೇನೆ. ಈ ಹೇಳಿಕೆ ಬಗ್ಗೆ ನನ್ನ ವಿರುದ್ಧ ದೂರು ನೀಡಲಿ. ಪಕ್ಷದಿಂದ ತೆಗೆದು ಹಾಕಲಿ. ನಾನು ಯಾರೆಂದು ತೋರಿಸುತ್ತೇನೆ’ ಎಂದು ಸವಾಲು ಹಾಕಿದರು.
‘ಪಾಲಿಕೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಕರೆದರೂ ನಾನು ಹೋಗುವುದಿಲ್ಲ. ಅವರು ಏನು ಹೇಳುತ್ತಾರೆ ನೋಡೋಣ, ಮರುದಿನ ನಾನು ಮಾತನಾಡುತ್ತೇನೆ’ ಎಂದು ಪೂಜಾರಿ ಹೇಳಿದರು.
‘ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಹಿರಿಯರನ್ನು ಕಡೆಗಣಿಸಿದ್ದರಿಂದಲೇ ಕರಾವಳಿಯಲ್ಲಿ ಕಾಂಗ್ರೆಸ್ ಸೋಲುವಂತಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಅದೇ ತಪ್ಪು ಮಾಡಲಾಗುತ್ತಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಹೇಳಿದರು.
ಹಲವು ಮೂಲ ಕಾಂಗ್ರೆಸಿಗರಿಗೆ ಅನ್ಯಾಯವಾಗಿದೆ. ಹಲವರಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನವಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
‘ಪಕ್ಷದ ಕಾರ್ಯಕರ್ತರಾಗಲಿ, ನಾಯಕರಾಗಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಇದನ್ನು ನಾನು ಬೇಸರಿಂದ ಹೇಳುತ್ತಿದ್ದೇನೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರು ನಾನು ಸತ್ತಿರುವುದಾಗಿ ಭಾವಿಸಿದ್ದಾರೆ. ಈ ರೀತಿ ಆಗಬಾರದಿತ್ತು. ಚುನಾವಣೆ ಘೋಷಣೆ ಆದ ಕೂಡಲೇ ನಾನು ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹಿರಿತನ, ಜಾತಿ ಹಾಗೂ ವರ್ಗಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದೆ’ ಎಂದರು.