ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?  ತಾಕತ್ತಿದ್ದರೆ ಎಫ್‌.ಐ.ಆರ್ ಆದವರೆಲ್ಲ ರಾಜೀನಾಮೆ ಕೊಡಿ

Spread the love

ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?  ತಾಕತ್ತಿದ್ದರೆ ಎಫ್‌.ಐ.ಆರ್ ಆದವರೆಲ್ಲ ರಾಜೀನಾಮೆ ಕೊಡಿ

ಮೈಸೂರು: ಅಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಇಂದು ಅದೇ ಕ್ಷೇತ್ರದಲ್ಲಿ ನಿಂತು ಸಿದ್ದುಗೆ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಲ್ಲದೆ, ಸ್ವಪಕ್ಷ ಜೆಡಿಎಸ್​​ಗೇ ಟಾಂಗ್ ನೀಡಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತರು. ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂದು ವಾದಿಸುತ್ತಾ ಹೋದರೆ ರಾಜ್ಯದಲ್ಲಿ ಎಲ್ಲ ರಾಜಕೀಯ ನಾಯಕರೂ ರಾಜೀನಾಮೆ ನೀಡಬೇಕಾದೀತು. ಹಾಗೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಎಂತಹ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನು ಸೋಲಿಸಲು ನಾವು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆ ಚುನಾವಣೆಯಲ್ಲಿ ಗೆದ್ದರು ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿದ್ದರಾಮಯ್ಯಗೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನೂ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಸಿದ್ದರಾಮಯ್ಯ” ಎನ್ನುತ್ತ ಸಿಎಂ, ಡಿಸಿಎಂ ಹಾಗೂ ಸಚಿವ ಮಹದೇವಪ್ಪರನ್ನು ಹಾಡಿ ಹೊಗಳಿದರು.

ಕುಮಾರಸ್ವಾಮಿಯೇ ರಾಜೀನಾಮೆ ಕೊಟ್ಟಿಲ್ಲ: ಜಿಟಿಡಿ
ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ 2 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಕುಮಾರಸ್ವಾಮಿ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅದೇ ರೀತಿ ಸಿದ್ದರಾಮಯ್ಯ ಸಹ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಜಿ.ಟಿ.ದೇವೇಗೌಡ ಪ್ರತಿಪಾದಿಸಿದರು.

”ಹಿಂದೆ ಮೈಸೂರು ರಾಜ್ಯವಿತ್ತು, ಆಮೇಲೆ ಕರ್ನಾಟಕ ಆಯಿತು. ಮಹರಾಜರು ಕಟ್ಟಿದ್ದ ಮೈಸೂರು ಇದು. ದಸರಾ ಉದ್ಘಾಟಕರ ಆಯ್ಕೆಯನ್ನು ಸಿಎಂಗೆ ಬಿಟ್ಟು ಕೊಟ್ಟಿದ್ದೆವು. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ. ಯಾವುದೇ ವಿವಾದ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕರುಣಿಸಲಿ” ಎಂದು ಜಿ.ಟಿ.ದೇವೇಗೌಡ ಪ್ರಾರ್ಥಿಸಿದರು.

ಎಫ್‌ಐಆರ್ ಆದವರೆಲ್ಲ ರಾಜೀನಾಮೆ ಕೊಡಿ: ”ತಾಕತ್ತಿದ್ದರೆ ಎಲ್ಲರೂ ಬನ್ನಿ. ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ವಿಧಾನಸೌಧದ ಮುಂದೆ ಸಾಲಾಗಿ ಬಂದು ರಾಜೀನಾಮೆ ಕೊಡಿ, ಕೊಡ್ತೀರಾ? ರಾಜೀನಾಮೆ ಕೊಡಬೇಕಂತೆ ರಾಜೀನಾಮೆ. ಮಾಡೋಕೆ ಬೇರೆ ಕೆಲಸ ಇಲ್ವ? ಏನು ಅಭಿವೃದ್ಧಿ ಕಾರ್ಯ ಆಗಬೇಕೋ ಅದನ್ನು ನೋಡಿ. ಕೇಂದ್ರದಿಂದ ಏನು ತರಬೇಕು, ರಾಜ್ಯದಿಂದ ಏನು ಹೋಗಬೇಕು ಅನ್ನೋದು ನೋಡಿ” ಎಂದು ಶಾಸಕ ಜಿ.ಟಿ.ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಈಗಾಗಲೇ ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್​ ವಾಪಸ್​ ಕೊಟ್ಟಿದ್ದಾರಲ್ಲಾ? ಮುಡಾ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಎಲ್ಲದಕ್ಕೂ ಸಹ ಸಿಎಂ ಸಿದ್ದರಾಮಯ್ಯ ಕಾರಣ ಅಲ್ಲ. ಕಾನೂನುಬದ್ಧವಾಗಿ 50:50 ಅನುಪಾತದಲ್ಲಿ ಸೈಟ್​ ಹಂಚಿಕೆ ಮಾಡಲಾಗಿದೆ. ಎಫ್​ಐಆರ್​ ದಾಖಲಾದ ತಕ್ಷಣ ರಾಜೀನಾಮೆ ಅಗತ್ಯವಿಲ್ಲ ಎಂದು ಜಿಟಿ ದೇವೇಗೌಡ ಹೇಳಿದರು.


Spread the love
Subscribe
Notify of

0 Comments
Inline Feedbacks
View all comments