Home Mangalorean News Kannada News ಸಿದ್ದರಾಮಯ್ಯ ಸಂಪುಟ ವಿಸ್ತರಣೆ: ರಾಮಲಿಂಗಾರೆಡ್ಡಿ ಹೆಗಲಿಗೆ ಗೃಹ ಖಾತೆ

ಸಿದ್ದರಾಮಯ್ಯ ಸಂಪುಟ ವಿಸ್ತರಣೆ: ರಾಮಲಿಂಗಾರೆಡ್ಡಿ ಹೆಗಲಿಗೆ ಗೃಹ ಖಾತೆ

Spread the love

ಸಿದ್ದರಾಮಯ್ಯ ಸಂಪುಟ ವಿಸ್ತರಣೆ: ರಾಮಲಿಂಗಾರೆಡ್ಡಿ ಹೆಗಲಿಗೆ ಗೃಹ ಖಾತೆ

ಬೆಂಗಳೂರು: ಜಿ. ಪರಮೇಶ್ವರ ಅವರಿಂದ ತೆರವಾದ ಗೃಹ ಖಾತೆಯನ್ನು ರಾಮಲಿಂಗಾರೆಡ್ಡಿಗೆ ಹೆಗಲಿಗೆ ಹೊರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶುಕ್ರವಾರ ಸಂಪುಟಕ್ಕೆ ಸೇರ್ಪಡೆಯಾದ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅವರಿಗೆ ಸಾರಿಗೆ ಖಾತೆ ನೀಡಿದ್ದಾರೆ.

ಸಂಪುಟಕ್ಕೆ ಹೊಸತಾಗಿ ಸೇರಿದ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪೂರ ಅವರಿಗೆ ಅಬಕಾರಿ, ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್‌) ಅವರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ನೀಡಲಾಗಿದೆ.

ಪ್ರಮಾಣ ವಚನ ಸ್ವೀಕಾರ ಪೂರ್ಣಗೊಂಡ ಬೆನ್ನಿಗೆ ಮುಖ್ಯಮಂತ್ರಿ ಖಾತೆಗಳನ್ನು ಮರು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೆಗಲಿಗೆ ಗೃಹ ಖಾತೆಯನ್ನು ವಹಿಸಿದ್ದಾರೆ. ಎಚ್‌.ಎಂ. ರೇವಣ್ಣ ಅವರಿಗೆ ಸಾರಿಗೆ ಖಾತೆ, ಅಬಕಾರಿ ಖಾತೆಯನ್ನು ತಿಮ್ಮಾಪುರ ಅವರಿಗೆ ನೀಡಲಾಗಿದೆ.

ಸಣ್ಣ ಕೈಗಾರಿಕೆ ಖಾತೆ ಹೊಂದಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹಕಾರ ಖಾತೆ ನೀಡಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೌಶಲ್ಯ ಅಭಿವೃದ್ಧಿ ಹೊಣೆಯನ್ನೂ ವಹಿಸಲಾಗಿದೆ. ಅಲ್ಲದೆ, ರಾಜ್ಯ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ), ರುದ್ರಪ್ಪ ಮಾನಪ್ಪ ಲಮಾಣಿ (ಜವಳಿ ಮತ್ತು ಮುಜರಾಯಿ), ಪ್ರಮೋದ್‌ ಮಧ್ವರಾಜ್‌ (ಯುವಜನ ಸೇವೆ ಮತ್ತು ಮೀನುಗಾರಿಕೆ) ಮತ್ತು ಈಶ್ವರ ಬಿ. ಖಂಡ್ರೆ ( ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ) ಅವರಿಗೆ ಸಂಪುಟ ದರ್ಜೆ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

ರೇವಣ್ಣ , ತಿಮ್ಮಾಪೂರ್‌, ಗೀತಾ ಮಹದೇವ ಪ್ರಸಾದ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ. ರೇವಣ್ಣ, ಆರ್‌.ಬಿ. ತಿಮ್ಮಾಪೂರ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಗೀತಾ ಮಹದೇವ ಪ್ರಸಾದ್‌ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರೇವಣ್ಣ ಮತ್ತು ತಿಮ್ಮಾಪೂರ ಅವರಿಗೆ ಸಂಪುಟ ದರ್ಜೆ, ಗೀತಾ ಅವರಿಗೆ ರಾಜ್ಯ ಸಚಿವ ಖಾತೆ ಸ್ಥಾನ ನೀಡಲಾಗಿದೆ.

ಸಚಿವರಾಗಿದ್ದ ಎಚ್‌.ಎಸ್‌. ಮಹದೇವ ಪ್ರಸಾದ್‌ ನಿಧನ ಹಾಗೂ ಲೈಂಗಿಕ ಹಗರಣ ಆರೋಪಕ್ಕೆ ಗುರಿಯಾದ ಎಚ್‌. ವೈ. ಮೇಟಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಮರು ಆಯ್ಕೆಯಾದ ಜಿ. ಪರಮೇಶ್ವರ ರಾಜೀನಾಮೆಯಿಂದ ತೆರವಾದ ಸ್ಥಾನಗಳನ್ನು ಇದೀಗ ತುಂಬಲಾಗಿದೆ.

ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯಯ ನೇತೃತ್ವದ ಸಚಿವ ಸಂಪುಟ ಎಲ್ಲ ಸ್ಥಾನಗಳು ಭರ್ತಿ ಆದಂತಾಗಿದೆ. ಇಂದು ರಾತ್ರಿ ವೇಳೆಗೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.


Spread the love

Exit mobile version