ಸಿದ್ಧಾರ್ಥ್ ಪತ್ತೆಗೆ ಕಾರವಾರದ ನೌಕಾನೆಲೆಯಿಂದ ಮುಳುಗು ತಜ್ಞರ ತಂಡ, ಬೋಟು ಆಗಮನ
ಮಂಗಳೂರು: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅವರ ಪತ್ತೆಗೆ ಕಾರವಾರದ ಅರಗಾ ಗ್ರಾಮದ ಕದಂಬ ನೌಕಾನೆಲೆಯಿಂದ ಮುಳುಗು ತಜ್ಞರ ತಂಡ ಮಂಗಳೂರಿಗೆ ಆಗಮಿಸಿದೆ.
ಶೋಧ ಕಾರ್ಯಕ್ಕೆ ಮುಳುಗು ತಜ್ಞರ ತಂಡ ಸೇರಿದಂತೆ 2 ಜೆಮಿನಿ ಬೋಟ್ ಮತ್ತು 8 ಮಂದಿ ಡೈವಿಂಗ್ ಸಹಾಯಕರ ತಂಡವನ್ನು ರವಾನಿಸಲಾಗಿದೆ ಎಂದು ನೌಕಾನೆಲೆ ಪಿಆರ್ಒ ಕ್ಯಾಪ್ಟನ್ ಅಜಯ್ ಕಪೂರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನು ಹೆಚ್ಚಿನ ಕಾರ್ಯಾಚರಣೆಗೆ ನುರಿತ ತಜ್ಞರನ್ನು ಕಳುಹಿಸಲಾಗಿದೆ ಎಂದು ಅಜಯ್ ಕಪೂರ್ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಿಲ್ಲ : ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ಮತ್ತು ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಮ್ಮಲ್ಲಿ ಜಿಲ್ಲಾಡಳಿತದಿಂದ ಎಂಟು ಟೀಂ ಕೆಲಸ ಮಾಡುತ್ತಿದೆ. ಎನ್‌ಡಿಆರ್‌ಎಫ್‌ನ ಮೂರು ಬೆಟಾಲಿಯನ್ ಇದೆ. ನೇವಿ, ಕೋಸ್ಟ್ ಗಾರ್ಡ್‌ನಿಂದ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಗೆ ಯಾವುದೇ ಅಡ್ಡಿಯಿಲ್ಲ. ಜಾಗ ವಿಸ್ತಾರವಾಗಿದೆ. ಯುನಿಟ್ ಆಗಿ ಸರ್ಚ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಯಾವುದನ್ನು ಖಚಿತವಾಗಿ ಹೇಳುವ ಪರಿಸ್ಥಿತಿ ಇಲ್ಲ. ಪೋಲಿಸ್ ತನಿಖೆ ನಡೆಯುತ್ತಿದೆ. ಸದ್ಯ ಯಾವುದೇ ಸುಳಿವು ಸಿಕ್ಕಿಲ್ಲ. ವ್ಯವಹಾರ ನಷ್ಟದ ಬಗ್ಗೆ ಮಾಹಿತಿಯಲ್ಲ. ಶೋಧನೆ, ರಕ್ಷಣಾ ಕಾರ್ಯಕ್ಕೆ ಮೊದಲ ಆದ್ಯತೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನದಿ ನೀರು ಸೇರುವ ಅಳಿವೆಬಾಗಿಲು, ಬೆಂಗ್ರೆ ಸಮೀಪ 4ಬೋಟುಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಗೃಹ ರಕ್ಷಕದಳ, ಅಗ್ಮಿಶಾಮಕದಳ ಸೇರಿದಂತೆ 100ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯ ಮೀನುಗಾರರು ಕೂಡ ದೋಣಿಗಳನ್ನು ಬಳಸಿ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಶ್ವಾನದಳದಿಂದಲೂ ಶೋಧ ನಡೆಸಲಾಗುತ್ತಿದ್ದು, ಸೇತುವೆಯ ಅರ್ಧಕ್ಕೆ ಬಂದು ಶ್ವಾನ ನಿಂತಿದೆ. ಕೋಸ್ಟ್ ಗಾರ್ಡ್ ಓವರ್ ಕ್ರಾಫ್ಟ್‌ನಿಂದಲೂ ಶೋಧಕ್ಕೆ ಯತ್ನಿಸಲಾಗುತ್ತಿದೆ.