ಸಿಸಿಬಿ ಕಾರ್ಯಾಚರಣೆ: ಕಳ್ಳತನ ಪ್ರಕರಣ ಪತ್ತೆ ಆರೋಪಿ ಹಾಗೂ ಸೊತ್ತು ವಶ
ಮಂಗಳೂರು: 2013 ನೇ ಡಿಸೆಂಬರ್ ತಿಂಗಳಲ್ಲಿ ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಹಾಗೂ ಕಳವಾದ ಸೊತ್ತನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತನನ್ನು ಬೆಳ್ತಂಗಡಿ ತಾಲೂಕು ಪದಕನೂರಿನ ವಿಘ್ನೇಶ್ ಜೋಗಿ (26) ಎಂದು ಗುರುತಿಸಲಾಗಿದೆ.
ದಿನಾಂಕ: 12-12-2013 ರಂದು ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿ ಗ್ರಾಮದ ಮೂಡಾಯಿಕಾಡು ನಿವಾಸಿ ಶ್ರೀ ವಲೇರಿಯನ್ ಅರನ್ನಾ ಎಂಬವರು ಬೆಳಿಗ್ಗೆ 8-45 ಗಂಟೆಗೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದು, ಮದ್ಯಾಹ್ನ 2-30 ಗಂಟೆಗೆ ವಾಪಾಸು ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನು ಪಿಕ್ಕಾಸಿನ ಸಹಾಯದಿಂದ ಒಡೆದು ಒಳಗೆ ಪ್ರವೇಶಿಸಿ ಮನೆಯ ಎದುರು ರೂಮಿನ ಗೋದ್ರೇಜ್ ನ ಸೇಫ್ ಲಾಕರ್ ನಲ್ಲಿರಿಸಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ನೆಕ್ಲೆಸ್, ಚಿನ್ನದ ಚೈನ್, ಚಿನ್ನದ ಬಳೆಗಳು, ಚಿನ್ನದ ಕಿವಿಯ ಬೆಂಡೋಲೆ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು, ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣವು ದಾಖಲಾಗಿತ್ತು.
ದಿನಾಂಕ: 03-01-2017 ರಂದು ಬೆಳಿಗ್ಗೆ ಚಿನ್ನಾಭರಣ ಮಾರಾಟ ಮಾಡಲು ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಅನುಮಾನಸ್ಪದ ರೀತಿಯಲ್ಲಿ ಓರ್ವ ವ್ಯಕ್ತಿಯಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಕೇಂದ್ರ ಮಾರುಕಟ್ಟೆ ಬಳಿಯ ರೂಪವಾಣಿ ಟಾಕೀಸ್ ಬಳಿಯಲ್ಲಿದ್ದ
ವಿಘ್ನೇಶ್ ಜೋಗಿ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ಚಿನ್ನದ ನೆಕ್ಲೆಸ್ ಸರ-1, ಚಿನ್ನದ ಕರಿಮಣಿ ಸರ -1, ಚಿನ್ನದ ಬಳೆಗಳು-3, 2 ಜೊತೆ ಚಿನ್ನದ ಕಿವಿಯ ಆಭರಣಗಳು, ಉಂಗುರ, ಚಿನ್ನದ ಚೈನ್-1, ಹೀಗೆ ಒಟ್ಟು 114 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ರೂ. 3,17,700/- ಆಗಿರುತ್ತದೆ.. ಆರೋಪಿ ವಿಘ್ನೇಶ್ ಜೋಗಿ ಹಾಗೂ ಆತನು ಕಳ್ಳತನ ನಡೆಸಿದ ಮೇಲ್ಕಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು