ಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೆಜಿ ಗಾಂಜಾದೊಂದಿಗೆ 3 ಆರೋಪಿಗಳ ಸೆರೆ
ಮಂಗಳೂರು: ಮಂಗಳೂರು ನಗರಕ್ಕೆ ಬೃಹತ್ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಮೇತ ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ರಮೀಝ್ ರಾಝ್ (24),ಮೊಹಮ್ಮದ್ ಹನೀಫ್(31),ಇಕ್ಬಾಲ್ ಹಾರಿಸ್(24) ಎಂದು ಗುರುತಿಸಲಾಗಿದೆ.
ಜುಲೈ 3 ರಂದು ಅಂಧ್ರಪ್ರದೇಶದ ಚಿತ್ತೂರಿನಿಂದ ಮಂಗಳೂರು ನಗರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಜಾವನ್ನು ಅಕ್ರಮವಾಗಿ ಗಾಂಜಾವನ್ನು ಖರೀದಿಸಿ ತಂದು ಮಂಗಳೂರಿನ ಫಳ್ನೀರ್ ರಸ್ತೆಯ ಲಾಡ್ಜ್ ವೊಂದರಲ್ಲಿ ಕೊಠಡಿಯನ್ನು ಪಡೆದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರ್ ನಲ್ಲಿನ ವಸತಿಗೃಹ ದಲ್ಲಿ ಗಾಂಜಾವನ್ನು ಹೊಂದಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು 10 ಕೆಜಿ ಗಾಂಜಾ, 3 ಮೊಬೈಲ್ ಫೋನ್, ಡಿಜಿಟಲ್ ತೂಕದ ಯಂತ್ರ, ಗಾಂಜಾಗಳನ್ನು ಸಣ್ಣ ಸಣ್ಣ ಪ್ಯಾಕೆಟ್ ಗಳಾಗಿ ಮಾರಾಟ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್ ಕವರ್ ಗಳು, ನಗದು ರೂ. 9,500/- ಹೊಂಡಾ ಯುನಿಕಾರ್ನ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾ, ಹಾಗೂ ಇತರ ಸೊತ್ತುಗಳ ಒಟ್ಟು ಮೌಲ್ಯ ರೂ. 3,00,000/- ಆಗಿರುತ್ತದೆ. ಈ ಗಾಂಜಾವನ್ನು ಆರೋಪಿಗಳು ಆಂದ್ರಪ್ರದೇಶದ ಚಿತ್ತೂರು ಎಂಬಲ್ಲಿಂದ ಖರೀದಿಸಿ ಮಂಗಳೂರಿಗೆ ತಂದು ವಸತಿಗೃಹದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ ಗಳನ್ನಾಗಿ ಮಾಡಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು.
ಆರೋಪಿಗಳ ಪೈಕಿ ರಮೀಝ್ ರಾಝ್ ಎಂಬಾತನು ಈ ಹಿಂದೆ 2016 ನೇ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ಎಂಬಲ್ಲಿರುವ ಹೊಟೇಲ್ ನಲ್ಲಿ ಗಲಾಟೆ ಮಾಡಿ ಸೊತ್ತುಗಳನ್ನು ಹಾನಿಗೊಳಿಸಿದ ಪ್ರಕರಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು. ಮೊಹಮ್ಮದ್ ಹನೀಫ್ ಎಂಬಾತನ ವಿರುದ್ಧ ಈ ಹಿಂದೆ 2016 ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ
ಹಾಗೂ ಇಕ್ಬಾಲ್ ಹಾರಿಸ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ವೈದ್ಯಕೀಯ ವಿದ್ಯಾರ್ಥಿನಿ ಯನ್ನು ಅಪಹರಣ ಮಾಡಿ ರೇಪ್ ಮಾಡಿದ ಪ್ರಕರಣ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಹಲ್ಲೆ ಮಾಡಿದ ಪ್ರಕರಣ ಮತ್ತು ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ ಇಲ್ಯಾಸ್ ಎಂಬಾತನಿಗೆ ಹಲ್ಲೆ ಮಾಡಿದ್ದು ಈ ಬಗ್ಗೆ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೀಗೆ ಒಟ್ಟು 5 ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಆರೋಪಿಗಳಿಂದ ಗಾಂಜಾ ವನ್ನು ಖರೀದಿಸುವವರ ಬಗ್ಗೆ ಮಾಹಿತಿ ದೊರೆತಿದ್ದು, ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಹನುಮಂತರಾಯ ಮತ್ತು ಎಸಿಪಿ ಸಿಸಿಆರ್ ಬಿ ವೆಲೆಂಟೈನ್ ಡಿ ಸೋಜಾ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.