ಸಿಸಿಬಿ ಹೆಸರಿನಲ್ಲಿ ಸುಲಿಗೆ ಪ್ರಕರಣ: ಒಬ್ಬನ ಬಂಧನ
ಮಂಗಳೂರು: ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡು ಶುಕ್ರವಾರ ಬಂದರು ಪ್ರದೇಶದ ಪಾನ್ ಮಸಾಲ ಅಂಗಡಿ ಮಾಲೀಕರಿಂದ ರೂ 2.25 ಲಕ್ಷ ಸುಲಿಗೆ ಮಾಡಿಕೊಂಡು ಹೋಗಿದ್ದ ಪ್ರಕರಣದಲ್ಲಿ ಯವಕನೊಬ್ಬನನ್ನು ಬಂಧಿಸಿರುವ ಮಂಗಳೂರು ಉತ್ತರ ಠಾಣೆ ಪೊಲೀಸರು, ಸುಲಿಗೆ ಮಾಡಿದ್ದ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕೋಯಿಕ್ಕೋಡ್‌ನ ಬೇಪುರಿ ಗ್ರಾಮದ ನಿವಾಸಿ ಶಾನೂಫ್ ಅಲಿಯಾಸ್ ಶಾನೂ (21) ಬಂಧಿತ. ಈತನ ನೇತೃತ್ವದ ಐವರ ತಂಡ ಶುಕ್ರವಾರ ಬೆಳಿಗ್ಗೆ ಯಾಕೂಬ್ ಎಂಬ ಪಾನ್ ಮಸಾಲ ವ್ಯಾಪಾರಿಯನ್ನು ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದಂತೆ ನಟಿಸಿತ್ತು. ಸ್ಕೂಟರ್‌ನಲ್ಲಿ ಇರಿಸಿದ್ದ ನಗದು ಸುಲಿಗೆ ಮಾಡಿಕೊಂಡು ಹೋಗಿತ್ತು.
ಕೋಯಿಕ್ಕೋಡ್ ಬೀಚ್‌ನಲ್ಲಿ ಭಾನುವಾರ ಸಂಜೆ ಶಾನೂಫ್‌ನನ್ನು ಬಂಧಿಸಿದ ಪೊಲೀಸರು, ಸುಲಿಗೆ ಮಾಡಿದ್ದ ನಗದು, ಕಾರು ಸೇರಿದಂತೆ ₹ 8.50 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಇತರೆ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದು ವರಿಸಿದೆ ಎಂದು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಠಾಣೆ ಇನ್‌ಸ್ಪೆಕ್ಟರ್ ಯೋಗೀ ಶ್‌ಕುಮಾರ್, ಸಬ್ ಇನ್‌ಸ್ಪೆಕ್ಟರ್ ಟಿ.ಪ್ರದೀಪ್, ಮೀಸಲು ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪದ್ಮನಾಭ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.