ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಸುವುದು ಅಕ್ರಮ – ಶಶಿಧರ ಶೆಟ್ಟಿ

Spread the love

ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಸುವುದು ಅಕ್ರಮ – ಶಶಿಧರ ಶೆಟ್ಟಿ

ಉಡುಪಿ: ಸದಾ ಪ್ರಕೃತಿ ರಕ್ಷಣೆಯ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಪೇಜಾವರ ಸ್ವಾಮಿಗಳು ಮರಳು ಮಾಫಿಯಾದವರ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮರಳುಗಾರಿಕೆ ಆರಂಭವಾಗದೆ ಹೋದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿಕೆ ನೀಡಿದ್ದಲ್ಲದೆ ಮರಳು ಮಾಫಿಯಾದವರಿಗೆ ಬೆಂಬಲಿಸಿರುವುದು ಅತ್ಯಂತ ಖೇದಕರ ಎಂದು ರಾಷ್ಟ್ರೀಯ ಪರಿಸರ ಮತ್ತು ವನ್ಯ ಜೀವಿ ಪ್ರೇಮಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೇಳಿದ್ದಾರೆ.

ಅವರು ಉಡುಪಿಯಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯ ಮರಳು ಮಾಫಿಯಾ ಕಳೆದ ಕೆಲವು ವರ್ಷಗಳಿಂದ ಪ್ರಾಕೃತಿ ಸಂಪತ್ತನ್ನು ಬೇಕಾಬಿಟ್ಟಿಯಾಗಿ ಕೊಳ್ಳೆಹೊಡೆದಿದೆ. ಇದು ಸಾಕಾಗಿಲ್ಲ ಎನ್ನುವಂತೆ ಒರ್ವ ಚುನಾಯಿತ ಜನಪ್ರತಿನಿಧಿ ರಘುಪತಿ ಭಟ್ ಅವರ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ಮಾಡಿದವರು ಧರಣಿ ಕುಳಿತು ಜಿಲ್ಲಾಧಿಕಾರಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬ ಕಾರಣಕ್ಕಾಗಿ ವರ್ಗಾವಣೆ ಮಾಡುವಂತೆ ಒತ್ತಾಯಿಸಿರುವುದು ನಿಜಕ್ಕೂ ಹಾಸ್ಯಸ್ಪದವಾಗಿದೆ. ಸಿ ಆರ್ ಝಡ್ ಕಾನೂನು ಕೇವಲ ಭಾರತಕ್ಕೆ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ ಬದಲಾಗಿ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಅದನ್ನು ಜಿಲ್ಲಾಧಿಕಾರಿಗಳು ಬದಲಿಸಲು ಅಥವಾ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲದೆ ಧರಣಿ ಮಾಡಿದ್ದಾರೆ ಎಂದರು.

ಕರಾವಳಿ ನಿಯಂತ್ರಣ ವಲಯ (ಸಿ ಆರ್ ಝಡ್) ಎಂಬುದು ಕೇವಲ ಒಂದು ಜಿಲ್ಲೆಗೆ ಸಂಬಂಧಿಸಿ ಆಸ್ತಿಯಲ್ಲ ಅದು ಇಡೀ ದೇಶದ ಆಸ್ತಿಯಾಗಿದ್ದು, ಕೆಲವು ವ್ಯಕ್ತಿಗಳು ನೈಸರ್ಗಿಕ ಪ್ರಾಕೃತಿ ಸಂಪತ್ತಿನ ಬಳಕೆಯನ್ನು ತಮಗೆ ಬೇಕಾದಂತೆ ನಿರ್ಧರಿಸಲು ಸಾಧ್ಯವಿಲ್ಲ.

ಕೇಂದ್ರ ಪರಿಸರ ಇಲಾಖೆಯ ಕಾಯಿದೆ ಹಾಗೂ ಸುತ್ತೋಲೆಯಂತೆ ಮರಳು ತೆಗೆಯವುದು ಒಂದು ಉದ್ಯಮವಲ್ಲ. ಒಳನಾಡು ಜಲಸಾರಿಗೆಯಲ್ಲಿ ಮೀನುಗಾರ ಸ್ಥಳೀಯ ದೋಣಿಗಳಿಗೆ ಕೆಲವೊಂದ ಕಡೆ ಮರಳಿನ ದಿಬ್ಬಗಳು ತಾಗಬಾರದೆಂದು, ಅಂತಹ ದಿಬ್ಬಗಳನ್ನು ಕೇಂದ್ರ ಪರಿಸರ ಇಲಾಖೆಯ ನಿರ್ದೇಶಿಸಿದ ಅಧಿಕೃತ ಸಂಸ್ಥೆಯಿಂದ ಗುರುತಿಸಿ ಆ ಮರಳನ್ನು ದೋಣಿಯ ಕುಲಕಸಬನ್ನು ಮಾಡುವ ಸಾಂಪ್ರಾದಾಯಿಕ ಸ್ಥಳೀಯ ಜನರು ತೆರವುಗೊಳಿಸಬೇಕು ಮತ್ತು ಈ ಮರಳನ್ನು ತೆಗೆಯಲು ಯಾವುದೇ ಕಾರ್ಮಿಕರನ್ನು, ಯಂತ್ರಗಳನ್ನು ಬಳಸಬಾರದು ಎಂಬ ಕಾನೂನಿದೆ.

ಸರಕಾರ 1 ಮೀ. ಘನ ಅಡಿಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡಿದ್ದರೆ ಗುತ್ತಿಗೆ ಪಡೆದವರು 20 ಮೀ.ನಷ್ಟು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ. ಮಂಗಳೂರಿನಿಂದ ವರ್ಷಕ್ಕೆ 850 ಕೋ. ರೂ., ಉಡುಪಿಯಿಂದ 620 ಕೋ. ರೂ. ಮರಳುಗಾರಿಕೆ ಲೂಟಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತ ಮರಳುಗಾರಿಕೆಗೆ ಜಾಗ ಗುರುತಿಸಿದ್ದರೂ ವೈಜ್ಞಾನಿಕವಾಗಿ ಗುರುತಿಸಿಲ್ಲ. ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಇದು ಬಹಿರಂಗಗೊಂಡಿದೆ. ಇಲ್ಲಿ ವೈಜ್ಞಾನಿಕವಾಗಿ ಗುರುತಿಸಲು ಅವಕಾಶ ಇರುವುದು ಸುರತ್ಕಲ್ನ ಎನ್ಐಟಿಕೆಗೆ ಮಾತ್ರ.
ಮರಳು ತೆಗೆಯಲು ಅವಕಾಶವೇ ಇಲ್ಲ ಎಂದಲ್ಲ. ನದಿಗಳಲ್ಲಿ ನಾಡದೋಣಿ ಹೋಗಲು ಅಡಚಣೆಯಾಗದಂತೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರೇ ಮರಳು ತೆಗೆಯಬೇಕು ಎಂಬ ನಿಯಮ ಇದೆ. ಈ ಮರಳನ್ನು ಸ್ಥಳೀಯ ಬಳಕೆಗೆ ನೀಡಬೇಕು ಎಂಬ ನಿಯಮವೂ ಇದೆ. ಆದರೆ ಇಂದು 3 ಮೀ. ನಾಡದೋಣಿ ಬದಲು 12 ಮೀ. ಉದ್ದ 3 ಮೀ. ಅಗಲದ ಕಬ್ಬಿಣದ ದೋಣಿ ಉಪಯೋಗಿಸಿ ಸರಕಾರ ನಿಷೇಧಿಸಿದ ಎಲ್ಲ ಕಡೆಯೂ ಮರಳು ಎತ್ತಲಾಗುತ್ತಿದೆ. ಬಿಹಾರ ಮೊದಲಾದ ರಾಜ್ಯಗಳಿಂದ ಬಂದ 2 ಸಾವಿರದಷ್ಟು ಕಾರ್ಮಿಕರು ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಪರವಾನಿಗೆ ನೀಡಿದ ಎಲ್ಲಾ ಕಡೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಮರಳನ್ನು ತೆಗೆಯಲು ಸಾಂಪ್ರಾದಾಯಿಕ ಮರದ ನಾಡದೋಣಿಯನ್ನು ಬಳಸದೇ ದೊಡ್ಡ ದೊಡ್ಡ ಕಬ್ಬಿಣದ ಬೋಟ್ ಮಾದರಿಯ ದೋಣಿಗಳನ್ನು ಬಳಸಲಾಗುತ್ತದೆ. ಮರಳು ತೆಗೆಯುವ ಗುತ್ತಿಗೆದಾರರು ಕಾರ್ಮಿಕರನ್ನು ಬಳಸುವಂತಿಲ್ಲ ಎಂಬ ಕೇಂದ್ರ ಪರಿಸರ ಇಲಾಖೆಯ ಸ್ಪಷ್ಟ ನಿರ್ದೇಶನ ಇದ್ದರೂ ಕೂಡ ಒಬ್ಬೊಬ್ಬ ಮರಳು ಗುತ್ತಿಗೆದಾರರು ಉತ್ತರ ಭಾರತದ ಬಿಹಾರ, ಒರಿಸ್ಸಾ, ರಾಜ್ಯಗಳಿಂದ ನೂರಾರು ಕಾರ್ಮಿಕರನ್ನು ಬಳಸುತ್ತಿರುವುದು ಕಾನೂನಿಸ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಅನಧಿಕೃತ ಮರಳು ಮಾಫಿಯಾದ ದಂಧೆಯಿಂದ ತಲ್ಲೂರು, ಉಪ್ಪಿನಕುದ್ರು, ಹೆರಿಕುದ್ರು, ಮುಂತಾದ ದ್ವೀಪಸದೃಷವಾದ ಊರುಗಳಲ್ಲಿ ಅಪರಿಚಿತ ಉತ್ತರಭಾರತದ ಮರಳು ಕಾರ್ಮಿಕರ ಹಗಲಿರುಳು ಒಡಾಟದಿಂದ ಆ ಭಾಗದ ಹೆಣ್ಣು ಮಕ್ಕಳಿಗೆ ಏಕಾಂಗಿಯಾಗಿ ತಿರುಗಾಡಲು ಭಯವಾಗುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಶಶಿಧರ ಶೆಟ್ಟಿ ಆರೋಪಿಸಿದರು.

ಕಾನೂನು ಪ್ರಕಾರ ಸ್ಥಳೀಯವಾಗಿ ತೆಗೆದ ಮರಳನ್ನು ಜಿಲ್ಲಾಡಳಿತ ನಿಗದಿತ ಬೆಲೆಗೆ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಪೊರೈಕೆ ಮಾಡಬೇಕು. ಆದರೆ ಉಭಯ ಜಿಲ್ಲೆಗಳಲ್ಲಿ ತೆಗೆದ ಮರಳುಗಳಲ್ಲಿ 90% ಮರಳನ್ನು ಕೇರಳ, ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ರಾಜಾರೋಷವಾಗಿ 10-12 ಚಕ್ರದ ಲಾರಿಗಳಲ್ಲಿ ತುಂಬಿಸಿ ಕಳಿಸಲಾಗುತ್ತದೆ ಇದು ಕಾನೂನು ಪ್ರಕಾರ ಅಪರಾಧ. ಎಲ್ಲಾ ಸೇತುವೆಗಳ ಎಡ, ಬಲ, ನದಿಯ ಹರಿವಿನ ವಿರುದ್ದ 500 ಮೀ – 250 ಮೀ ನೇರಕ್ಕೆ ಮರಳುಗಾರಿಕೆ ನಿಷೇಧಿಸಲಾಗಿದೆ ಹಾಗೂ ಈ ಸೇತುವೆಗಳ ಕೆಳಗಡೆ ಮರಳು ಸಂಗ್ರಹಿಸುವುದು ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ ಹಾಗೂ ಈ ಬ್ರಿಡ್ಜ್ ಗಳ ಕೆಳಗಡೆ ಮರಳು ಸಂಗ್ರಹಿಸುವುದು ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ನಮ್ಮ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಳಗಡೆಯ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ.

ಮರಳುಗಾರಿಕೆಗೆ ಅನುಮತಿ ಪಡೆದುಕೊಂಡು ಹೆಚ್ಚಿನವರು ತಮ್ಮ ಲೈಸನ್ಸನ್ನು ಬೇರೆ ಎರಡು ಮೂರು ಜನರಿಗೆ ಬಾಡಿಗೆ ಕೊಟ್ಟು ಆರವತ್ತು ಎಪ್ಪತ್ತು ಸಾವಿರ ತಿಂಗಳಿಗೆ ಪಡೆಯುತ್ತಿದ್ದಾರೆ. ಇವರಿಂದ ಒಂದೆ ಲೈಸನ್ಸಡಿ ಎರಡರಿಂದ ಮೂರು ಜನ ನೂರಾರು ಕಾರ್ಮಿಕರನ್ನು ಹಾಕಿಕೊಂಡು ಹಗಲಿರುಳು ಮರಳನ್ನು ಲೂಟಿ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟವನ್ನು ಮತ್ತು ಪರಿಸರಕ್ಕೂ ಹಾನಿಯನ್ನು ಮಾಡುತ್ತಿದ್ದಾರೆ ಎಂದು ಶಶಿಧರ ಶೆಟ್ಟಿ ಆರೋಪಿಸಿದರು.

ಸಿಆರ್ ಝಡ್ ಸಂಬಂಧಿತ ಕಾನೂನು ಅತ್ಯಂತ ಪ್ರಬಲವಾಗಿದ್ದು ಇದುವರೆಗೆ ಮರಳನ್ನು ದೋಚಿದವರು ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳು ನ್ಯಾಯಾಲಯದ ಶಿಕ್ಷೆ ಅನುಭವಿಸುವುದು ಶತ ಸಿದ್ದ. ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಪರವಾನಿಗೆ ನೀಡುವುದಕ್ಕೆ ತಮ್ಮ ಅಕ್ಷೇಪಗಳಿದ್ದು ಈ ಬಗ್ಗೆ ಈಗಾಗಲೇ ಜಿ್ಲ್ಲಾಧಿಕಾರಿಗಳಿಗೆ ಮನವಿ ಮೂಲಕ ನಮ್ಮ ಆಕ್ಷೇಪಗಳನ್ನು ಸಲ್ಲಿಸಿದ್ದೇವೆ ಎಂದು ಶಶಿಧರ ಶೆಟ್ಟಿ ಹೇಳಿದರು.


Spread the love