ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆ: ಕಾಂಗ್ರೆಸ್‌ 126, ಬಿಜೆಪಿ 70, ಜೆಡಿಎಸ್‌ಗೆ 27 ಸ್ಥಾನಗಳು

Spread the love

ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆ: ಕಾಂಗ್ರೆಸ್‌ 126, ಬಿಜೆಪಿ 70, ಜೆಡಿಎಸ್‌ಗೆ 27 ಸ್ಥಾನಗಳು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರವುದಲ್ಲದೇ 2013ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ ಎಂದು ‘ಸಿ-ಫೋರ್’ ಸಮೀಕ್ಷಾ ವರದಿ ತಿಳಿಸಿದೆ.

ಮಾರ್ಚ್ 1 ರಿಂದ 25ರ ನಡುವೆ ಸಿ-ಫೋರ್’ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು ಎಂದು ನ್ಯೂಸ್ 18 ಸುದ್ದಿವಾಹಿನಿ ವರದಿ ಮಾಡಿದೆ.

154 ವಿಧಾನಸಭಾ ಕ್ಷೇತ್ರಗಳಲ್ಲಿನ 22,357 ಮತದಾರರನ್ನು ಸಂದರ್ಶನ ಮಾಡಿ ಈ ಸಮೀಕ್ಷಾ ವರದಿ ತಯಾರಿಸಲಾಗಿದೆ. ಸಂದರ್ಶನಕ್ಕೆ ಒಳಪಡಿಸಿದ ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದವರಾಗಿದ್ದಾರೆ. 326 ಪಟ್ಟಣ ಅಥವಾ ನಗರ ಪ್ರದೇಶ ಹಾಗೂ 977 ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎಂದು ಸಿ-ಫೋರ್ ಸಂಸ್ಥೆ ಸಮೀಕ್ಷಾ ವರದಿಯಲ್ಲಿ ವಿವರಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ 46ರಷ್ಟು ಮತಗಳನ್ನು ಪಡೆಯಲಿದೆ. ಬಿಜೆಪಿ ಮತ್ತು ಜೆಡಿಎಸ್‌ ಕ್ರಮವಾಗಿ ಶೇ 31 ಹಾಗೂ ಶೇ 16 ರಷ್ಟು ಮತಗಳನ್ನು ಪಡೆಯಲಿವೆ. ಕಾಂಗ್ರೆಸ್ 126 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ 70 ಹಾಗೂ ಜೆಡಿಎಸ್‌ 27 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

2013ರಲ್ಲಿ ಕೂಡ ಸಿ-ಫೋರ್ ಸಂಸ್ಥೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಹೇಳಿತ್ತು. ಕಾಂಗ್ರೆಸ್ 119 ರಿಂದ 120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳಲ್ಲಿ ಗೆಲುವು ಕಂಡಿತ್ತು.


Spread the love