Home Mangalorean News Kannada News ಸುಜ್ಲಾನ್ ಕಾರ್ಮಿಕರ ವಜಾ: ಪ್ರತಿಭಟನೆ, ಕರ್ನಾಟಕ ಕಾರ್ಮಿಕ ವೇದಿಕೆ, ಸೊರಕೆ ಭಾಗಿ

ಸುಜ್ಲಾನ್ ಕಾರ್ಮಿಕರ ವಜಾ: ಪ್ರತಿಭಟನೆ, ಕರ್ನಾಟಕ ಕಾರ್ಮಿಕ ವೇದಿಕೆ, ಸೊರಕೆ ಭಾಗಿ

Spread the love

ಸುಜ್ಲಾನ್ ಕಾರ್ಮಿಕರ ವಜಾ: ಪ್ರತಿಭಟನೆ, ಕರ್ನಾಟಕ ಕಾರ್ಮಿಕ ವೇದಿಕೆ, ಸೊರಕೆ ಭಾಗಿ

ಪಡುಬಿದ್ರಿ: ಸುಜ್ಲಾನ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಮುನ್ಸೂಚನೆ ನೀಡದೆ ಏಕಾಏಕಿ ವಜಾಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಸುಜ್ಲಾನ್ ಕಂಪೆನಿಯ ಗುತ್ತಿಗೆ ವಹಿಸಿರುವ ಯುನಿಟೆಕ್ ಮತ್ತು ಎಸ್‍ಎಸ್‍ಪಿಎಲ್‍ನ ಎಲ್ಲಾ ಕಾರ್ಮಿಕರು ಬೆಳಗ್ಗೆ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕಂಪೆನಿಯಲ್ಲಿ 780ಮಂದಿ ಕಾರ್ಮಿಕರಿಗೆ ಹಾಜರಾತಿ ಪುಸ್ತಕ ನೀಡಲು ನಿರಾಕರಿಸಿ ತಮ್ಮನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಕಾರ್ಮಿಕರ ಗಮನಕ್ಕೆ ತಂದರು.

ತಮ್ಮನ್ನು ಕೆಲಸದಿಂದ ಏಕಾಏಕಿ ಮುನ್ಸೂಚನೆ ನೀಡದೆ ವಜಾಗೊಳಿಸಿರುವ ಕ್ರಮವನ್ನು ವಿರೋಧಿಸಿ ಅಸಮಾಧಾನಗೊಂಡ ಕಾರ್ಮಿಕರು ಕಂಪೆನಿಯ ಆವರಣದಲ್ಲಿ ಬೆಳಗ್ಗೆನಿಂದ ಸಂಜೆಯವರೆಗೂ ಕಂಪೆನಿಯ ಅನ್ನ, ನೀರು ತ್ಯಜಿಸಿ ಪ್ರತಿಭಟನೆ ನಡೆಸಿದರು.

ಸಂಜೆಯ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ರವಿಶೆಟ್ಟಿ , ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಧರಣಿ ಕುಳಿತರು. ಈ ವೇಳೆ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಕಾಪು ಶಾಸಕ ವಿನಯಕುಮಾರ್ ಸೊರಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ವಜಾಗೊಂಡ ಕಾರ್ಮಿಕರನ್ನು ಕಂಪೆನಿಗೆ ಮಂಗಳವಾರ ಬೆಳಗ್ಗೆಯೊಳಗೆ ಮರು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದ ಸೊರಕೆ, ಇಲ್ಲದಿದ್ದಲ್ಲಿ ನಾಳೆ ನಡೆಯುವ ಪ್ರತಿಭಟನೆಯಲ್ಲಿ ಕಾರ್ಮಿಕರೊಂದಿಗೆ ನಾನೂ ಭಾಗವಹಿಸುತ್ತೇನೆ ಎಂದರು.
ಕಂಪೆನಿ ಅಧಿಕಾರಿಗಳಾದ ಅಶೋಕ್ ಶೆಟ್ಟಿ, ಫಿಲಿಪ್ ಆಂಟೋನಿ, ದಕ್ಷಿಣಾ ಮೂರ್ತಿ, ಕಿಶೋರ್, ಸ್ಥಳೀಯರಾದ ನವೀನ್‍ಚಂದ್ರ ಜೆ.ಶೆಟ್ಟಿ, ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು.


Spread the love

Exit mobile version