ಸುಡುಮಣ್ಣು ಬೆಂಕಿ ಆರಿಸಲು ಹೋದ ರೈತ ಸಜೀವ ದಹನ!
ಕುಂದಾಪುರ: ಗದ್ದೆಯಲ್ಲಿ ಕೃಷಿ ತ್ಯಾಜ್ಯ (ಸುಡುಮಣ್ಣು) ಕ್ಕೆ ಬೆಂಕಿ ಹಾಕಿದ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತೆಲ್ಲಾ ಹಬ್ಬಿ ಗದ್ದೆಯಲ್ಲೇ ರೈತನೋರ್ವ ಸಜೀವ ದಹನವಾಗಿ ಸಾವನ್ನಪ್ಪಿದ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಸಾವನ್ನಪ್ಪಿದ ಕೃಷಿಕ.
ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಮಹಾಲಿಂಗ ದೇವಾಡಿಗ ಕೃಷಿ ತ್ಯಾಜ್ಯ (ಸುಡುಮಣ್ಣು) ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಆವರಿಸಿದ್ದು, ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬುತ್ತಿದ್ದರಿಂದ ಎಚ್ಚೆತ್ತ ಮಹಾಲಿಂಗ ಅವರ ಪುತ್ರಿ ಬೇಬಿ ಕೂಡಲೇ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೇಳೆ ಇತ್ತ ಮಹಾಲಿಂಗ ದೇವಾಡಿಗ ದೊಡ್ಡ ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ರಸ್ತೆಯ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿದ್ದರಿಂದ ಮಹಾಲಿಂಗ ದೇವಾಡಿಗ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.