ಸುದ್ದಿಯ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿದರೆ ಪೋಲಿಸರಿಗೆ ದೂರು ನೀಡಿ; ಉಡುಪಿ ಜಿಲ್ಲಾ ಪತ್ರಕರ್ತರ ಸಂಘ

Spread the love

ಸುದ್ದಿಯ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿದರೆ ಪೋಲಿಸರಿಗೆ ದೂರು ನೀಡಿ; ಉಡುಪಿ ಜಿಲ್ಲಾ ಪತ್ರಕರ್ತರ ಸಂಘ

ಉಡುಪಿ: ಕುಂದಾಪುರದಲ್ಲಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿ ಬಂಧನಕ್ಕೆ ಒಳಗಾಗಿರುವ ಘಟನೆಯನ್ನು ಪತ್ರಕರ್ತರ ವಿಚಾರದ ಬಗ್ಗೆ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಗಂಭೀರವಾಗಿ ಪರಿಗಣಿಸಿದ್ದು ಬಂಧನಕ್ಕೆ ಒಳಗಾಗಿರುವ ಲೋಕೇಶ್, ಧರ್ಮೇಂದ್ರ, ಮಂಜುನಾಥ್ ಎಂಬ ಆರೋಪಿಗಳು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವುದಿಲ್ಲ. ಅವರಿಗೆ ಮತ್ತು ಸಂಘಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೇಳಿದೆ.

ಅಲ್ಲದೆ ಜಿಲ್ಲೆಯ ಇತರ ಭಾಗಗಳಲ್ಲಿಯೂ ಕೂಡ ಇಂತಹ ಪ್ರಕರಣಗಳ ಬಗ್ಗೆ ಸಂಘಕ್ಕೆ ದೂರುಗಳು ಬಂದಿದ್ದು, ಯಾವುದೇ ಅಧಿಕೃತ ಅಥವಾ ಅನಧಿಕೃತ ಪತ್ರಕರ್ತರು ಸುದ್ದಿಗಾಗಿ ಹಣ ವಸೂಲಿ ಮಾಡಿ ಬೆದರಿಕೆ ಹಾಕಿದ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ನಿರ್ದಾಕ್ಷಿಣ್ಯವಾಗಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸುವಂತೆ ಜಿಲ್ಲಾ ಪತ್ರಕರ್ತರ ಸಂಘ ವಿನಂತಿಸುತ್ತದೆ.

ಅಧಿಕೃತ ಪತ್ರಕರ್ತರಾಗಿದ್ದಲ್ಲಿ ಅವರಿಗೆ ಜಿಲ್ಲಾ ಸಂಘವು ರಾಜ್ಯ ಸಂಘದಿಂದ ಕೊಡಮಾಡಲ್ಪಡುವ ಅಧಿಕೃತ ಗುರುತು ಚೀಟಿ ಇದ್ದು ಅದು ಇಲ್ಲದೆ ಹೋದಲ್ಲಿ ಅಂತಹವರು ಜಿಲ್ಲಾ ಸಂಘದ ಸದಸ್ಯರಾಗಿರುವುದಿಲ್ಲ ಎನ್ನುವುದನ್ನು ಸಾರ್ವಜನಿಕರ ಗಮನಕ್ಕೆ ತರಬಯಸುತೇವೆ.

ಇಂತಹ ಕೃತ್ಯದಲ್ಲಿ ಸಂಘದ ಯಾವುದೇ ಸದಸ್ಯರು ಕೂಡ ತೊಡಗಿಸಿಕೊಂಡ ಮಾಹಿತಿ ಇದ್ದರೆ ಸಂಘಕ್ಕೆ ಅಥವಾ ಹತ್ತಿರದ ಪೋಲಿಸ್ ಠಾಣೆಗೆ ದಾಖಲೆ ಸಮೇತ ಒದಗಿಸಿ ಅಂತಹವರ ಮೇಲೆ ಜಿಲ್ಲಾ ಸಂಘ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಲ್ಯಾಕ್‌ಮೇಲ್ ಪ್ರಕರಣ: ಕುಂದಾಪುರ ತಾಲೂಕು ಪತ್ರಕರ್ತರ ಸಂಘದಿಂದ ಖಂಡನೆ
ಕುಂದಾಪುರ: ಪತ್ರಕರ್ತರ ಸೋಗಿನಲ್ಲಿ ಸಾರ್ವಜನಿಕರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರ ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಗೆ ನಿರಂತರ ತೊಂದರೆ ಕೊಡುತ್ತಿದ್ದ ಈ ಮೂವರ ಕೃತ್ಯವನ್ನು “ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ” ತೀವ್ರವಾಗಿ ಖಂಡಿಸಿದೆ.

ಪ್ರಕರಣದ ಆರೋಪಿಗಳಾದ ಲೋಕೇಶ್ ಭಂಡಾರಿ ಮತ್ತು ಮಂಜುನಾಥ ಎಂಬ ಇಬ್ಬರು ಪತ್ರಕರ್ತರ ಸಂಘದ ಸದಸ್ಯರಲ್ಲ. ಆದರೆ ಇನ್ನೋರ್ವ ಆರೋಪಿಯಾದ ಧರ್ಮೇಂದ್ರ ಬೆಂಗಳೂರಿನ ಪತ್ರಿಕೆಯೊಂದರ ದಾಖಲೆಗಳನ್ನು ನೀಡಿ ಎರಡು ತಿಂಗಳ ಹಿಂದಷ್ಟೆ ನಮ್ಮ ಸಂಘದ ಸದಸ್ಯತ್ವ ಪಡೆದಿರುತ್ತಾರೆ. ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರ ಸದಸ್ಯತ್ವವನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ.

ಯಾವುದೇ ಪತ್ರಕರ್ತರು ಅಥವಾ ಪತ್ರಕರ್ತರೆಂದು ಹೇಳಿಕೊಳ್ಳುವವರು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಕಿರುಕುಳ ಕೊಡುವುದು ಮತ್ತು ಹಣ ವಸೂಲಿಗೆ ಇಳಿಯುವುದನ್ನು ಕುಂದಾಪುರ ತಾ.ಕಾ.ನಿ ಪತ್ರಕರ್ತರ ಸಂಘ ಎಂದಿಗೂ ಬೆಂಬಲಿಸುವುದಿಲ್ಲ. ಅಂತಹ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದನ್ನು ನಮ್ಮ ಸಂಘವು ಸದಾ ಬೆಂಬಲಿಸುತ್ತದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love