ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ

Spread the love

ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ

ಕಾರ್ಕಳ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಕೆಟ್ಟ ಮನೋಭಾವವನ್ನು ಬಿಟ್ಟು ಎಲ್ಲರನ್ನು ಗೌರವಿಸುವ ಕೆಲಸ ಮಾಡಲಿ ಮತ್ತು ಅವರಿಂದ ರಾಮನ ಬಗ್ಗೆ ಪಾಠ ಕಲಿಯಬೇಕಾದ ಅಗತ್ಯ ತನಗಿಲ್ಲ ಎಂದು ರಾಜ್ಯ ಅರಣ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಅವರು ಬುಧವಾರ ರಾತ್ರಿ ಕಾರ್ಕಳದಲ್ಲಿ ಶಾಸಕ ಸುನೀಲ್ ಕುಮಾರ್ ಅವರು ರೈ ವಿರುದ್ದ ನೀಡಿದ್ದ ಹೇಳಿಕೆಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿ ಕಾರ್ಕಳ ಕ್ಷೇತ್ರದ ಶಾಸಕರಾದ ಸುನೀಲ್ ಕುಮಾರ್ ಅವರು ನನ್ನ ಕ್ಷೇತ್ರದಲ್ಲಿ ಬಂದು ಬಂಟ್ವಾಳ ಕ್ಷೇತ್ರದ ಚುನಾವಣೆ ಅದು ರಾಜೇಶ್ ನಾಯ್ಕ್ ಮತ್ತು ರಮಾನಾಥ್ ರೈ ನಡುವಿನ ಸ್ಪರ್ಧೆ ಅಲ್ಲ ಬದಲಾಗಿ ರಾಮ ಮತ್ತು ಅಲ್ಲಾನ ಮಧ್ಯೆ ಚುನಾವಣೆ ಎಂದು ಹೇಳಿಕೆ ನೀಡಿದ್ದಾರೆ. ಸುನೀಲ್ ಕುಮಾರ್ ಒರ್ವ ಕನಿಷ್ಠ ಜ್ಞಾನ ಇಲ್ಲದ ವ್ಯಕ್ತಿಯಾಗಿದ್ದಾರೆ. ದೇವರೊಬ್ಬನೇ ಎಂದು ಎನ್ನುವುದನ್ನು ಜನ ತಿಳಿದುಕೊಂಡಿದ್ದು, ರಾಮ, ಅಲ್ಲಾ, ಯೇಸು ಆಗಲಿ ಎಲ್ಲವೂ ದೇವರ ಹೆಸರುಗಳು, ದೇವರನ್ನು ನಂಬುವಂತರು, ಗೌರವಿಡುವವರು ಇಂತಹ ಸಣ್ಣ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಭಾರತೀಯ ಜನತಾ ಪಕ್ಷ ಇಂತಹ ಕೀಳು ಮಟ್ಟದ ಹೇಳಿಕೆಗೆ ಅವಕಾಶ ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಸಮಸ್ತ ಸಮಾಜಕ್ಕೆ ತೊಂದರೆ ತರಲಿದೆ. ಮತೀಯ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಕೋಮು ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡುವುದು ಎಷ್ಟು ಸರಿ ಎನ್ನುವುದನ್ನು ಜನ ತಿಳಿದುಕೊಳ್ಳಬೇಕಾಗಿದೆ ಎಂದರು.

ನಾನು ರಮಾನಾಥ ರೈ, ನನ್ನ ತಂದೆ ನನ್ನನ್ನು ಮಗುವಾಗಿದ್ದಾಗ ರಾಮೇಶ್ವರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇಟ್ಟ ಹೆಸರು ರಮಾನಾಥ. ದೇವರ ಬಗ್ಗೆ , ರಾಮನ ಬಗ್ಗೆ ಇವರುಗಳು ನಮಗೆ ಪಾಠ ಹೇಳಬೇಕಾದ ಅಗತ್ಯ ಇಲ್ಲ. ನಾನು ಈ ಜಿಲ್ಲೆಯ ಎಲ್ಲಾ ಧರ್ಮದ, ಭಾಷೆಯ ಮೇಲೆ ಗೌರವ ಇಟ್ಟುಕೊಂಡವನಾಗಿದ್ದೇನೆ. ಈ ತುಳುನಾಡಿನಲ್ಲಿರುವ ಎಲ್ಲಾ ದೈವ ದೇವರುಗಳು ನನ್ನ ಆತ್ಮದಲ್ಲಿದ್ದಾರೆ. ಸುನೀಲ್ ಕುಮಾರ್ ಅವರ ಮನಸ್ಸಿನಲ್ಲಿರುವುದು ಕೇವಲ ಮತೀಯ ಭಾವನೆ ಕೆರಳಿಸುವಂತಹದ್ದು ಬೇರೆ ಏನು ಅಲ್ಲ.

ಸುನೀಲ್ ಕುಮಾರ್ ಇಲ್ಲಿ ಹುಲಿ ಯೋಜನೆ ತರುತ್ತಾರೆ ಎಂದು ಜನರಿಗೆ ಸುಳ್ಳು ಹೇಳಿ ಶಾಸಕರಾಗಿ ಆಯ್ಕೆಯಾದವರು ಅಲ್ಲದೆ ಅವರು ಎಷ್ಟು ಆಸ್ತಿಯನ್ನು ಸಂಪಾದಿಸಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರವಾಗಿದೆ.ಸಾರ್ವಜನಿಕ ಬದುಕಿನಲ್ಲಿ ಅದೇಷ್ಟೋ ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ವ್ಯಕ್ತಿಯಾಗಿ, ಅನೇಕ ಸಾರಿ ಶಾಸಕ, ಮಂತ್ರಿಯಾಗಿ ಪ್ರಾಮಾಣಿಕತೆ ಬಿಟ್ಟು ಬೇರೆ ಯಾವುದೇ ಕೆಲಸ ಮಾಡಿಲ್ಲ ನನ್ನನ್ನು ಯಾರೂ ಕೂಡ ಒರ್ವ ಜಾತಿವಾದಿ ಎಂದು ಕರೆದಿಲ್ಲ ನಾನು ಮತಿಯವಾದಿ ಎಂದು ಕರೆದಿಲ್ಲ. ನಾನು ಇತರ ಧರ್ಮದವರನ್ನು ಪ್ರೀತಿ ಮಾಡುತ್ತೇನೆ ಎನ್ನುವುದನ್ನು ಇವರು ತಪ್ಪು ಎನ್ನುತ್ತಿದ್ದು, ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದ ಬಿಜೆಪಿಗರು ಚುನಾವಣೆ ಬಂದಾಗ ನಮ್ಮ ಕ್ಷೇತ್ರದಲ್ಲಿ ಬಂದು ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ನಾನು ಎಲ್ಲಾ ಧರ್ಮದವರನ್ನು ಪ್ರೀತಿ ಮಾಡುವ ವ್ಯಕ್ತಿ, ನಾನು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಮಾತನ್ನು ಹೇಳಿದ್ದೆ. ನನ್ನಲ್ಲಿ ಬ್ಯಾರಿ ಭಾಷೆ ಮಾತನಾಡುವವರು ದೊಡ್ಡ ಸಂಖ್ಯೆಲ್ಲಿದ್ದಾರೆ. ಪ್ರತಿ ಸಾರಿ ಜೆಡಿಎಸ್ ನನ್ನ ಕ್ಷೇತ್ರದಲ್ಲಿ ಪ್ರತಿ ಬಾರಿ ಒರ್ವ ಮುಸ್ಲಿಂ ಭಾಂಧವರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ನನಗೆ ಯಾವತ್ತೂ ಕೂಡ ಅದರಿಂದ ತೊಂದರೆ ಆಗಿಲ್ಲ. ಕಳೆದ ಬಾರಿ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರ ಪುನರ್ ವಿಂಗಡಣೆ ಆದಾಗ, ವಿಟ್ಲ ಕ್ಷೇತ್ರದ ಮುಕ್ಕಾಲು ಭಾಗ ನನ್ನ ಕ್ಷೇತ್ರಕ್ಕೆ ಬಂತು. ಅಲ್ಲಿ ಶಾಸಕರಾಗಿದ್ದ ಕೆ ಎಮ್ ಇಬ್ರಾಹಿಂ   ಅವರು ನನ್ನ ಕ್ಷೇತ್ರದಲ್ಲಿದ್ದ ಜಾತ್ಯಾತೀತ ಮುಸ್ಲಿಂ ಬಾಂಧವರು ನನಗೆ ಮತ ಹಾಕಿದ್ದರಿಂದ ನಾನು ಶಾಸಕನಾಗಿದ್ದೇನೆ ಎಂಬ ಮಾತನ್ನು ಹೇಳಿದ್ದೆ. ಅದರ ಜೊತೆಯಲ್ಲಿ ಇನ್ನೊಂದ ಮಾತನ್ನು ಕೂಡ ಹೇಳಿದ್ದೆ, ಇಬ್ರಾಹಿಂ ಅವರಿಗೆ ಸಿಕ್ಕ ಮತ 7000, ಒಂದು ವೇಳೆ ಜಾತ್ಯಾತೀತ ಮುಸ್ಲಿಂರು ಮತ ಹಾಕದೆ ಹೋದರೆ ನಾನು ಮಾಜಿ ಆಗುತ್ತಿದ್ದೆ ಎಂದು ಹೇಳಿದ್ದೆ ಅದನ್ನೇ ತಪ್ಪಾಗಿ ಅರ್ಥೈಸಿ ನನ್ನ ಜಾತ್ಯಾತೀತ ನಿಲುವನ್ನು ಪ್ರಶ್ನೆ ಮಾಡುವ ಕೆಲಸ ಸುನೀಲ್ ಕುಮಾರ್ ಮಾಡುತ್ತಿದ್ದಾರೆ.

ನಾನು ನನ್ನ ಕ್ಷೇತ್ರದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಜನರ ಜೋತೆ ಹೇಗೆ ಕೆಲಸ ಮಾಡುತ್ತಿದ್ದೇನೆ ಎನ್ನುವುದು ಸಾರ್ವಜನಿಕರಿಗೆ ತಿಳಿದ ವಿಚಾರವಾಗಿದೆ. ರಮಾನಾಥ ರೈ ಏನು ಎನ್ನುವುದನ್ನು ನನ್ನ ಕ್ಷೇತ್ರದ ಜನತೆಗೆ ಇನ್ನೊಬ್ಬರು ಬಂದು ಪಾಠ ಮಾಡುವ ಅಗತ್ಯ ಇಲ್ಲ.ನನ್ನ ಜನ ನನಗೆ ಹೇಗೆ ಗೌರವ ನೀಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ಸುನೀಲ್ ಕುಮಾರ್ ನೀಡಿರುವ ಹೇಳಿಕೆ ಮೂರ್ಖತನದ್ದು, ಇವರು ನನ್ನ ಜಾತ್ಯಾತೀತ ನಿಲುವನ್ನು ಪ್ರಶ್ನೆ ಮಾಡಿ ಏನು ಮಾಡಲು ಕೂಡ ಸಾಧ್ಯವಿಲ್ಲ. ಇವರು ಇವರ ಕೆಟ್ಟ ಮನೋಭಾವವನ್ನು ಬಿಟ್ಟು ಎಲ್ಲರನ್ನು ಗೌರವಿಸುವ ಕೆಲಸ ಮಾಡಲಿ ಎಂದರು.


Spread the love