ಸುರಕ್ಷತಾ ಯಾತ್ರೆ ನೆಪದಲ್ಲಿ ಬಿಜೆಪಿಯಿಂದ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ; ಜಿಲ್ಲಾ ಕಾಂಗ್ರೆಸ್

Spread the love

ಸುರಕ್ಷತಾ ಯಾತ್ರೆ ನೆಪದಲ್ಲಿ ಬಿಜೆಪಿಯಿಂದ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನ ; ಜಿಲ್ಲಾ ಕಾಂಗ್ರೆಸ್

ಉಡುಪಿ: ಬಿಜೆಪಿ ತನ್ನ 5 ವರ್ಷಗಳ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಹಲವು ಸಚಿವರ ಹಗರಣಗಳೊಂದಿಗೆ ಜನರ ಸುರಕ್ಷತೆಗೆ ಧಕ್ಕೆ ತಂದಿತ್ತು. ಈ ಸಮಾಜ ಘಾತಕ ಶಕ್ತಿಗಳನ್ನು ನಿಗ್ರಹಿಸಿ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ಧಿಯ ನೆಲೆವೀಡಾಗಿಸಿದ ಕೀರ್ತಿ ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯನವರ ಸರಕಾರಕ್ಕೆ ಸಲ್ಲುತ್ತದೆ. ರಾಜ್ಯ ಈಗಾಗಲೇ ಶಿಕ್ಷಣ, ಆರೋಗ್ಯ, ಹೂಡಿಕೆ, ಮಾಹಿತಿ ತಂತ್ರಜ್ಞಾನ, ನೈರ್ಮಲ್ಯ ಹಾಗೂ ಹಸಿವು ಮುಕ್ತದಂತಹ ಜನಪರ ಕಾರ್ಯಕ್ರಮಗಳಿಂದ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಅನುಷ್ಠಾನ ಹಾಗೂ ಯೋಜನೆಗಳಲ್ಲಿ ರಾಜ್ಯ ಹಲವು ಪ್ರಥಮ ಪ್ರಶಸ್ತಿಗಳನ್ನು ಗಳಿಸುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕರ್ನಾಟಕ ಗುರುತಿಸಿಕೊಳ್ಳುವಂತಾಗಿದೆ. ವಿದೇಶಿಯರು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಹಾತೊರೆಯುತ್ತಿರುವಾಗ ಬಿಜೆಪಿ ಇದನ್ನು ಸಹಿಸದೆ ಜನತೆಯ ಶಾಂತಿ ಕದಡುವುದಕ್ಕಾಗಿ ಸುರಕ್ಷಾ ಯಾತ್ರೆ ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಪಡೆಯುವ ಯಾವುದೇ ಮುನ್ಸೂಚನೆ ದೊರೆಯದೇ ಇರುವುದರಿಂದ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಚುನಾವಣೆಯನ್ನು ಮುಂದೂಡುವ ಕಸರತ್ತು ಬಿಜೆಪಿಯಿಂದ ನಡೆಯುತ್ತಿದೆ. ಬಿಜೆಪಿ ಈ ಹಿಂದಿನ ಹಗರಣಗಳ ಆಡಳಿತವನ್ನು ಕಂಡಿರುವ ಜನತೆ ಸಿದ್ಧರಾಮಯ್ಯನವರ ಜನಪರ ಹಾಗೂ ಅಭಿವೃದ್ಧಿ ಆಡಳಿತದಿಂದ ಸಂತುಷ್ಟರಾಗಿದ್ದಾರೆ. ಜನತೆ ರಾಜ್ಯ ಬಿಜೆಪಿ ಮುಖಂಡರಲ್ಲಿ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಅಮಿತ್ ಶಾ ಹಾಗೂ ಮೋದಿಯವರನ್ನು ಹೆಚ್ಚು ಅವಲಂಬಿಸಿ ಪ್ರಧಾನಿ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರನ್ನು ಪದೇ ಪದೇ ರಾಜ್ಯಕ್ಕೆ ಬರಮಾಡಿಕೊಂಡು ಸರಕಾರದ ಮೇಲೆ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ವಿವಿಧ ವರ್ಗಗಳನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರದೊಂದಿಗೆ ಬಿಜೆಪಿಯ ಆದಾರ ರಹಿತ ಸುಳ್ಳು ಆರೋಪಗಳಿಗೆ ಜನತೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಸತ್ತವರೆಲ್ಲಾ ಹಿಂದೂ ಸಂಘಟನೆಯ ಸಕ್ರೀಯ ಸದಸ್ಯರೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಈ ನೆಪದಲ್ಲಿ ಪ್ರತಿಭಟನೆ ದೊಂಬಿಗಳಿಗೆ ಉತ್ತೇಜನ ನೀಡಿ ಸಮಾಜಘಾತಕ ಶಕ್ತಿಗಳಿಗೆ ಬಿಜೆಪಿ ಪ್ರೇರಣೆ ನೀಡುತ್ತಿದೆ.

ಸಂಸದೆ ಶೋಭಾರವರು ಉಡುಪಿ-ಚಿಕ್ಕಮಗಳೂರು ಸಂಸದೆಯರಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸದೆ ರಾಜ್ಯದಲ್ಲೆಡೆ ಸುರಕ್ಷಾ ಯಾತ್ರೆ ನೆಪದಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭದ್ರತೆಯ ವಾತಾವರಣ ಇಲ್ಲದಿದ್ದರೂ ಸುರಕ್ಷತಾ ಯಾತ್ರೆಯ ಹಿನ್ನಲೆ ಏನು? ಇದು ಜನರ ಸುರಕ್ಷಾ ಯಾತ್ರೆಯಾಗಿರದೆ ಬಿಜೆಪಿಗರ ಸುರಕ್ಷತಾ ಯಾತ್ರೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love