ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಶಿಫಾರಸು ಮಾಡಿ – ಹೆದ್ದಾರಿ ಪ್ರಾಧಿಕಾರಕ್ಕೆ ಖಾದರ್ ಸೂಚನೆ
ಮಂಗಳೂರು: ಸುರತ್ಕಲ್‌ನ ಟೋಲ್ ಗೇಟ್ ಅನ್ನು ಶಾಶ್ವತವಾಗಿ ಮುಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವಂತೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೋಜನಾ ನಿರ್ದೇಶಕರು ಕೂಡಲೇ ಕೇಂದ್ರ ಹೆದ್ದಾರಿ ಇಲಾಖೆಗೆ ಪತ್ರ ಬರೆದು, ಟೋಲ್‌ಗೇಟ್ ಮುಚ್ಚಲು ಶಿಫಾರಸು ಮಾಡಬೇಕು ಎಂದರು.
ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಮಾತನಾಡಿ, ‘ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನ ಮಾಡುವ ನಿಟ್ಟಿನಲ್ಲಿ ಒಂದು ವರ್ಷದಿಂದ ಪ್ರಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಒಪ್ಪಿಗೆ ನೀಡಿದೆ. ಆದರೆ, ಹೆಜಮಾಡಿ ಟೋಲ್‌ಗೇಟ್ ನಿರ್ವಹಣೆ ಮಾಡುತ್ತಿರುವ ನವಯುಗ್ ಕಂಪನಿ ಇದಕ್ಕೆ ಒಪ್ಪಿಗೆ ನೀಡಿಲ್ಲ’ ಎಂದು ತಿಳಿಸಿದರು.
ಈ ಸಭೆಯಲ್ಲಿ ಚರ್ಚಿಸಿದ ವಿಷಯ ಗಳು, ಸದ್ಯದ ಸ್ಥಿತಿ, ಟೋಲ್‌ಗೇಟ್ ವಿರೋಧಿಸಿ 11 ದಿನ ನಡೆದ ಸತ್ಯಾಗ್ರಹ ಸೇರಿದಂತೆ ಎಲ್ಲ ವಿಷಯಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಟೋಲ್‌ಗೇಟ್ ಮುಚ್ಚುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿ, ಸಂಬಂಧಿಸಿದ ಅಧಿಕಾರಿ ಗಳಿಗೆ ಜಿಲ್ಲಾಡಳಿತದಿಂದ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಸಚಿವ ಯು.ಟಿ. ಖಾದರ್, ಸುರತ್ಕಲ್ ಟೋಲ್‌ಗೇಟ್ ಮುಚ್ಚುವ ವಿಚಾರದಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಸಾರ್ವಜನಿಕರೇ ಒತ್ತಾಯದಿಂದ ಟೋಲ್ ಸಂಗ್ರಹವನ್ನು ನಿಲ್ಲಿಸುವಂತಹ ವಾತಾವರಣ ಸೃಷ್ಟಿಸ ಬಾರದು ಎಂದರು.
ಕೇಂದ್ರ ಹೆದ್ದಾರಿ ಇಲಾಖೆಗೆ ಬರೆಯುವ ಪತ್ರದಲ್ಲಿ ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್‌ಗೇಟ್ ಜತೆ ವಿಲೀನ ಮಾಡುವ ಕುರಿತು ಪ್ರಸ್ತಾಪಿಸದೇ, ಸುರತ್ಕಲ್ ಟೋಲ್‌ಗೇಟ್ ಮುಚ್ಚುವ ಕುರಿತು ವಿವರಿಸಬೇಕು. ವಿಲೀನದ ಕುರಿತು ಪ್ರಸ್ತಾಪಿಸಿದಲ್ಲಿ ಇದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, 2015 ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಗೇಟ್ ಆರಂಭಿಸಲಾಗಿತ್ತು. ಈ ಟೋಲ್‌ಗೇಟ್ ಮುಚ್ಚಲು ಈ ವರ್ಷ ಜನವರಿಯಲ್ಲಿಯೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಅದಾಗ್ಯೂ ಟೋಲ್ ಸಂಗ್ರಹ ಕೇಂದ್ರ ಕಾರ್ಯಾಚರಣೆ ನಡೆಸುತ್ತಲೇ ಇದೆ ಎಂದು ದೂರಿದರು.
ಟೋಲ್‌ಗೇಟ್‌ನ ನಿರ್ವಹಣೆಗಾಗಿ ಗುತ್ತಿಗೆದಾರರು, ಹೆದ್ದಾರಿ ಪ್ರಾಧಿಕಾರಕ್ಕೆ ನಿತ್ಯ ₹8.5 ಲಕ್ಷ ಪಾವತಿಸುತ್ತಿದ್ದು, ಅದಾಗ್ಯೂ ಆಂಬುಲೆನ್ಸ್ ಆಗಲಿ, ಶೌಚಾಲಯ ಸೌಲಭ್ಯವಾಗಲಿ ಇಲ್ಲ. ಟೋಲ್ ಸಂಗ್ರಹದ ಗುತ್ತಿಗೆ ಅಕ್ಟೋಬರ್ 30ಕ್ಕೆ ಕೊನೆಗೊಂಡಿದ್ದು, ಹೊಸ ಗುತ್ತಿಗೆದಾರರು ಟೋಲ್ ಸಂಗ್ರಹಕ್ಕೆ ಮುಂದಾಗದೇ ಇರುವುದರಿಂದ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸಲಾಗಿದೆ. ಇದು ಅಕ್ರಮ ಎಂದು ಹೇಳಿದರು.
ಕೂಡಲೇ ಟೋಲ್‌ಗೇಟ್ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಕೃಪೆ: ಪ್ರಜಾವಾಣಿ