ಸುರತ್ಕಲ್ : ಎಂಆರ್‌ಪಿಎಲ್ ವಸತಿ ಪ್ರದೇಶದಿಂದ ಹರಿದ ತ್ಯಾಜ್ಯ ನೀರು ಕುತ್ತೆತ್ತೂರು ಗ್ರಾಮಸ್ತರ ಆಕ್ರೋಶ

Spread the love

ಸುರತ್ಕಲ್ : ಮೂಡುಪದವು ಬಳಿ ಇರುವ ಎಂಆರ್‌ಪಿಎಲ್‌ನ ಕಾವಲು ಸಿಬ್ಬಂದಿ ಘಟಕ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ವಸಗೃಹದ ಕೊಳಕು ತ್ಯಾಜ್ಯ ನೀರು ಕುತ್ತೆತ್ತೂರು ಗ್ರಾಮಕ್ಕೆ ಹರಿದು ಗ್ರಾಮದ ಜನತೆ ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಎಂಆರ್‌ಪಿಎಲ್ ಕುತ್ತೆತ್ತೂರು ಗ್ರಾಮಕ್ಕೆ ಇನ್ನೊಂದು ಕೊಡುಗೆಯನ್ನು ನೀಡಿದೆ ಎಂದು ಗ್ರಾಮಸ್ಥರು ನೊಂದು ನುಡಿಯುತ್ತಿದ್ದಾರೆ.

cisf 5 CISF

ಎಂಆರ್‌ಪಿಎಲ್ ಮೇಲ್ವಿಚಾರಣೆಗೆ ಒಳಪಟ್ಟ ಈ ವಸತಿಗೃಹದ ತ್ಯಾಜ್ಯ ನೀರನ್ನು ಶುದ್ದೀಕರಣ ಘಟಕದ ಮೂಲಕ ಶುದ್ದೀಕರಿಸಿ ಕುತ್ತೆತ್ತೂರು ಗ್ರಾಮಕ್ಕೆ ಮೂಡು ಪದವು ಬಳಿ ಬಿಡಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದು ಈಗ ಶುದ್ದೀಕರಣ ಘಟಕದ ಯಂತ್ರವು ಕೆಟ್ಟು ಹೋಗಿರುವುದರಿಂದ ತ್ಯಾಜ್ಯ ನೀರನ್ನು ಹಾಗೆಯೇ ಬಿಡಲಾಗಿದೆ ಎಂದು ಆಪಾದಿಸಲಾಗಿದೆ. ಈ ಭಾಗದ ಹಲವಾರು ಮನೆಗಳ ನಿವಾಸಿಗಳು ದುರ್ಗಂಧವನ್ನು ತಡೆದುಕೊಳ್ಳಲಾರದೆ ವಾಂತಿ ಮಾಡುವಂತಾಗಿದೆ. ಕುಡಿಯುವ ನೀರಿನ ಬಾವಿ ಕಲುಷಿತಗೊಂಡಿದೆ.
ತ್ಯಾಜ್ಯ ನೀರು ಹರಿದ ಪ್ರದೇಶಕ್ಕೆ ಪೆರ್ಮುದೆ ಪಂಚಾಯತ್ ಅಧ್ಯಕ್ಸೆ ಸರೋಜ, ಉಪಾಧ್ಯಕ್ಷ ಕಿಶೋರ್, ಅಭಿವೃದ್ದಿ ಅಧಿಕಾರಿ ಹಸನಬ್ಬ, ಭೇಟಿ ನೀಡಿದ್ದಾರೆ. ಸ್ಥಳೀಯ ವಾರ್ಡ್ ಸದಸ್ಯರುಗಳಾದ ನವೀನ್ ಶೆಟ್ಟಿ, ಪುಷ್ಪ, ವಾಯಲೆಟ್ ಫೆರ್ನಾಂಡಿಸ್, ರಾಮಪ್ರಸಾದ್ ಪಂಡಿತ್, ಜಗನ್ನಾಥ ಶೆಟ್ಟಿ ಈ ಬಗ್ಗೆ ತೀವ್ರವಾದ ಖಂಡನೆಯನ್ನು ವ್ಯಕ್ತಪಡಿಸಿದ್ದು ಎಂಆರ್‌ಪಿಎಲ್ ಈಗಾಗಲೇ ತೈಲದ ತ್ಯಾಜ್ಯವನ್ನು ರಹಸ್ಯವಾಗಿ ಈ ಭಾಗದಲ್ಲಿ ಬಿಡುತ್ತಿದ್ದು, ಈ ಇದರ ಭದ್ರತಾ ಸಿಬ್ಬಂದಿಗಳ ತ್ಯಾಜ್ಯದ ಹೊಲಸು ನೀರನ್ನು ಕುತ್ತೆತ್ತೂರು ಗ್ರಾಮಕ್ಕೆ ಬಳುವಳಿಯಾಗಿ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love