ಸುರತ್ಕಲ್ ಕಡಂಬೋಡಿ ಮತ್ತಿತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಬಿರುಸಿನ ಮತಯಾಚನೆ
ರಾಜ್ಯ ಜನತೆ ಬಿಜೆಪಿ ಆಶೀರ್ವಾದ ನೀಡಿದ ಸಂದರ್ಭದಲ್ಲಿ ಪರಸ್ಪರ ಕಚ್ಚಾಟ, ಭ್ರಷ್ಟಾಚಾರ ನಡೆಸಿ ಮೂವರು ಮುಖ್ಯಮಂತ್ರಿಗಳು ಅಧಿಕಾರ ನಡೆಸಿರುವುದೇ ಅವರ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಟೀಕಿಸಿದರು.
ಸುರತ್ಕಲ್ ಕಡಂಬೋಡಿ ಮತ್ತಿತರ ಪ್ರದೇಶದಲ್ಲಿ ಬಿರುಸಿನ ಮತಯಾಚನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜನತೆ ಆಶೀರ್ವಾದ ನೀಡಿ ಅಧಿಕಾರ ನೀಡಿದ ವೇಳೆ ಅದಕ್ಕೆ ಪ್ರತ್ಯುತ್ತರವಾಗಿ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಅದು ಬಿಟ್ಟು ಪರಸ್ಪರ ಕಚ್ಚಾಟ ನಡೆಸಿಕೊಂಡು, ಪರಸ್ಪರ ಕಾಲು ಎಳೆದುಕೊಂಡು ಭ್ರಷ್ಟಾಚಾರ ಮಾಡುವುದಲ್ಲ. ಬಿಜೆಪಿಯ ಅಂದಿನ ಮುಖ್ಯಮಂತ್ರಿ ಸೇರಿದಂತೆ ಸಚಿವರು ಜೈಲು ಪಾಲಾಗಿರುವುದು ಇದಕ್ಕೆ ತಾಜಾ ಉದಾಹರಣೆ ಎಂದರು.
ಜೈಲು ಸೇರಿದ ಅಂದಿನ ಮುಖ್ಯಮಂತ್ರಿಯನ್ನೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದು ಬಿಜೆಪಿಯ ಅಭಿವೃದ್ಧಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ಕಳಂಕಿತ ವ್ಯಕ್ತಿ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಬಿಜೆಪಿಯ ಇನ್ನೊಂದು ಮುಖ ಬಯಲಾಗಿದೆ. ಇದನ್ನು ಜನತೆ ಅರಿತುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಒಳಜಗಳದಿಂದಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ.ಇನ್ನು ಅನುದಾನ ಬಿಡುಗಡೆ, ರಾಜ್ಯದ ಅಭಿವೃದ್ಧಿ ಸಾಧ್ಯವೆ? ಬಿಜೆಪಿ ಜನತಾ ಕಾಲನಿ ಜನತೆಗೆ ಯಾವುದೇ ಮೂಲಸೌಕರ್ಯ ಒದಗಿಸಲು ವಿಫಲವಾಗಿತ್ತು. ತಾನು ಅಧಿಕಾರ ಸ್ವೀಕರಿಸಿದ ಬಳಿಕ ರಸ್ತೆ ವಿಸ್ತರಣೆ, ಕಾಂಕ್ರಟೀಕರಣ, ಅಲ್ಲಿನ ದೈವ ದೇವಸ್ಥಾನಗಳಿಗೆ ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದೇನೆ. ಹೀಗಾಗಿ ಅಭಿವೃದ್ಧಿ ಮಾಡಿದ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು.
ಹಂಗಾಮಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಪೂಜಾರಿ, ಕೆ.ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ಗೋವರ್ದನ್ ಶೆಟ್ಟಿಗಾರ್,ವಿಜಯ್ ಆಚಾರ್ಯ ,ಮೆಹಸೂಫ್ ಮತ್ತಿತರರು ಉಪಸ್ಥಿತರಿದ್ದರು.