ಸುರತ್ಕಲ್ – ಬಿ.ಸಿ ರೋಡ್ ಚತುಷ್ಪಥ ರಸ್ತೆಯ ಸಮಸ್ಯೆಗೆ ಶೀಘ್ರ ಮುಕ್ತಿ ; ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ!
ಕಳೆದ ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹದಗೆಟ್ಟಿರುವ ಸುರತ್ಕಲ್ ಬಿ.ಸಿ.ರೋಡ್ ಚತುಷ್ಪಥ ಟೋಲ್ ರಸ್ತೆಯ ಸಮಸ್ಯೆಗೆ ಶೀಘ್ರ ಮುಕ್ತಿ ಸಿಗಲಿದೆ ಎಂದು ದ.ಕ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರೀಜೆಶ್ ಚೌಟರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ರಸ್ತೆಯನ್ನು ನಿರ್ಮಾಣ ಮಾಡಿ ಟೋಲ್ ಸಂಗ್ರಹದ ಮೂಲಕ ನಿರ್ವಹಣೆ ಮಾಡಲಾಗ್ತಾ ಇತ್ತು. ಆದ್ರೆ ಇದೀಗ ಈ ರಸ್ತೆಯಲ್ಲಿ ಹೊಂಡಗುಂಡಿಗಳು ತುಂಬಿದ್ದು, ದೇಶದ ಪ್ರಮುಖ ಬಂದರು ರಸ್ತೆ ತೀರಾ ದುಸ್ಥಿತಿಗೆ ತಲುಪಿದೆ. ಈ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರ ಗಮನಕ್ಕೆ ತಂದು ಸರ್ಕಾರದಿಂದ 26 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದರು ಹೇಳಿದ್ದಾರೆ.
ಎಲ್ಲವೂ ಸುಸೂತ್ರವಾಗಿ ನಡೆದರೆ ಎಪ್ರಿಲ್ ಹತ್ತರಿಂದ ಕಾಮಗಾರಿಯನ್ನು ಆರಂಭಿಸಿ ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸುರತ್ಕಲ್ ನಿಂದ ಎಪಿಎಂಸಿ ಯಾರ್ಡ್, ಕೂಳೂರಿನಿಂದ ಎಜೆ ಆಸ್ಪತ್ರೆ, ಹಾಗೂ ನಂತೂರಿನಿಂದ ಪಡೀಲ್ ವರೆಗೆ 11 .02 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಮರೀಕರಣ ಹಾಗೂ ತುಂಬೆಯಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಾಸ್ ಡ್ರೈನೇಜ್ ವ್ಯವಸ್ಥೆ ಮತ್ತು ರಸ್ತೆಯ ನಡುವಿನ ವಿಭಜಕದಲ್ಲಿನ ನಿರ್ವಹಣೆಗಾಗಿ ಈ ಹಣ ವಿನಿಯೋಗ ಆಗಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಶಿರಾಡಿ ಘಾಟ್ ರಸ್ತೆಯ ಅಭಿವೃದ್ದಿ ವಿಚಾರವಾಗಿ ಸಾಕಷ್ಟು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಸ್ಪಂಧನೆ ಸಿಕ್ಕಿಲ್ಲ. ಶಿರಾಡಿ ಘಾಟ್ ನಲ್ಲಿ ರಸ್ತೆ ಅಭಿವೃದ್ದಿಗೆ ಅರಣ್ಯ ಇಲಾಖೆಯಿಂದ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಸಹಕಾರ ಬೇಕಿದೆ . ರಾಜ್ಯ ಸರ್ಕಾರ ಭೂ ಒತ್ತುವರಿ ವಿಚಾರದಲ್ಲಿ ಸಹಕಾರ ನೀಡದ ಕಾರಣ ಈ ಹೆದ್ದಾರಿಯ ಅಭಿವೃದ್ದಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.