ಸುರತ್ಕಲ್ -ಬಿ.ಸಿ ರೋಡ್ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಶ್ರೀಘ್ರದಲ್ಲೇ ಆರಂಭ
ಸಂಸದ ಕ್ಯಾ.ಚೌಟ ಅವರ ಪ್ರಯತ್ನದ ಫಲವಾಗಿ ಬಗೆಹರಿಯಲಿದೆ ಎನ್‌ಎಂಪಿಟಿ ಸಂಪರ್ಕಿಸುವ ಹೆದ್ದಾರಿಗಳ ಸಮಸ್ಯೆ
ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿ(NMPRCL)ಗೆ ಸೇರಿದ ಸುರತ್ಕಲ್-ಬಿಸಿರೋಡ್‌ವರೆಗಿನ ಒಟ್ಟು 37.42 ಕಿಮೀ. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣಾ ಕಾಮಗಾರಿ, ಮರು ಡಾಂಬರೀಕರಣ ಹಾಗೂ ಸುರಕ್ಷತಾ ವ್ಯವಸ್ಥೆ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯು ಇದೀಗ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಗುತ್ತಿಗೆ ಕಂಪೆನಿ ಆಯ್ಕೆ ನಡೆದು ಕಾಮಗಾರಿ ಶುರುವಾಗುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಸುರತ್ಕಲ್-ನಂತೂರು, ಬಿಸಿ.ರೋಡ್-ಪಡೀಲ್ ಹಾಗೂ ನಂತೂರು ಜಂಕ್ಷನ್‌ನಿಂದ ಪಡೀಲ್‌ವರೆಗಿನ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ರಿಪೇರಿ, ಮರುಡಾಂಬರೀಕರಣ ಹಾಗೂ ನಿರ್ವಹಣೆ ಕೆಲಸಗಳಿಗಾಗಿ ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್(ಎನ್‌ಎಂಪಿಆರ್‌ಸಿಎಲ್) ಒಟ್ಟು 26.05 ಕೋಟಿ ರೂ. ವೆಚ್ಚದಲ್ಲಿ ಎರಡು ತಿಂಗಳ ಹಿಂದೆ ಟೆಂಡರ್ ಆಹ್ವಾನಿಸಿತ್ತು. ಇದೀಗ ಸುಮಾರು ಐದು ಕಂಪೆನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡು ಕೆಲವೇ ದಿನಗಳಲ್ಲಿ ಅರ್ಹ ಕಂಪೆನಿಯನ್ನು ಆಯ್ಕೆಗೊಳಿಸಿ ಕಾಮಗಾರಿ ಪ್ರಾರಂಭವಾಗಲಿದೆ. ಆ ಮೂಲಕ ಮೂರು ಹೆದ್ದಾರಿಗಳನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಸುಗಮವಾಗಿ ವಾಹನಗಳ ಸಂಚಾರ, ಸರಕು ಸಾಗಣೆ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಮಯ ಹತ್ತಿರವಾಗಿದೆ.
ಈ ಕಾಮಗಾರಿಯಡಿ ಸುರತ್ಕಲ್‌ನಿಂದ ಎಪಿಎಂಸಿ, ಕೂಳೂರಿನಿಂದ ಎಜೆ ಆಸ್ಪತ್ರೆ ಹಾಗೂ ನಂತೂರಿನಿಂದ ಪಡೀಲ್‌ವರೆಗಿನ 11.084 ಕಿಮೀ. ಉದ್ದದ ರಸ್ತೆಯ ಡಾಂಬರೀಕರಣ ನಡೆಯಲಿದೆ. ಅಲ್ಲದೆ, ಹೆದ್ದಾರಿ ಬದಿ ಬೆಳೆದಿರುವ ಗಿಡ-ಗಂಟಿ ತೆಗೆಯುವ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ. ಜತೆಗೆ ರಸ್ತೆ ಬದಿ ಜಾಗದ ನಿರ್ವಹಣೆ, ಇತರ ನಿರ್ವಹಣಾ ಕಾಮಗಾರಿ ಹಾಗೂ ಹೆದ್ದಾರಿಯ ಸುರಕ್ಷತಾ ವ್ಯವಸ್ಥೆ ಅಳವಡಿಕೆ ಕಾರ್ಯ ಕೂಡ ನಡೆಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಸೂಕ್ತ ನಿರ್ವಹಣೆಯಿಲ್ಲದೆ ಸರಕು ಸಾಗಣೆ ವಾಹನಗಳು ಹಾಗೂ ಇತರೆ ವಾಹನ ಸವಾರರ ಸುಗಮ-ಸುರಕ್ಷಿತ ಸಂಚಾರಕ್ಕೆ ಹಲವು ರೀತಿಯ ಸಮಸ್ಯೆ- ಸವಾಲು ಎದುರಾಗಿದ್ದವು. ಇದೀಗ ಈ ಹೆದ್ದಾರಿಗಳ ಸೂಕ್ತ ನಿರ್ವಹಣೆ ಹಾಗೂ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಿ ಅಗತ್ಯ ಕಾಮಗಾರಿ ಕೈಗೊಳ್ಳುವುದಕ್ಕೆ NMPRCL ಟೆಂಡರ್ ಆಹ್ವಾನಿಸಿದ್ದು, ಇದೀಗ ಇದರ ಪ್ರಕ್ರಿಯೆ ಕೂಡ ಅಂತಿಮ ಹಂತದಲ್ಲಿದೆ. ಈ ಹೆದ್ದಾರಿಗಳಲ್ಲಿ ಅಗತ್ಯ ಮೂಲಸೌಕರ್ಯಗಳು ಅಭಿವೃದ್ಧಿಯಾದರೆ ಸರಕು ವಾಹನಗಳ ಹಾಗೂ ಸಾರ್ವಜನಿಕರ ಸುಗಮ-ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಆ ಮೂಲಕ ರಾಜ್ಯದಾ ವಾಣಿಜ್ಯ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ಮಂಗಳೂರು ನಗರದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದೆಲ್ಲೆಡೆ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ನವಮಂಗಳೂರು ಬಂದರು ಸಂಪರ್ಕಿಸುವ ಹೆದ್ದಾರಿಗಳ ನವೀಕರಣ ಹಾಗೂ ಸುರಕ್ಷತಾ ಕ್ರಮ ಅಳವಡಿಕೆ ಕಾರ್ಯವು ಅನುದಾನದ ಕೊರತೆಯಿಂದಾಗಿ ಬಾಕಿಯಾಗಿತ್ತು. ನಾನು ಸಂಸದನಾದ ಬಳಿಕ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಸಚಿವಾಲಯ ಜತೆಗೂ ಮಾತುಕತೆ ನಡೆಸಿ ಈ ಹೆದ್ದಾರಿಗಳ ಕಾಯಕಲ್ಪಕ್ಕೆ ಪ್ರಯತ್ನಿಸಿದ್ದು, ಶೀಘ್ರದಲ್ಲೇ ಈ ಹೆದ್ದಾರಿಗಳ ರಿಪೇರಿ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕ್ಯಾ. ಚೌಟ ಅವರು ತಿಳಿಸಿದ್ದಾರೆ.